ಎಫ್.ಎಂ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವರಿಗೆ ಬಿ.ವೈ ರಾಘವೇಂದ್ರ ಮನವಿ

Public TV
2 Min Read
SMG MP

ಶಿವಮೊಗ್ಗ: ಜಿಲ್ಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲು ಬಹುದಿನಗಳಿಂದ ಜಿಲ್ಲೆಯ ಜನರ ಕನಸಾಗಿರುವ ಎಫ್.ಎಂ ರೇಡಿಯೋ ಕೇಂದ್ರವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

ಈ ಹಿಂದೆ ಶಿವಮೊಗ್ಗದಲ್ಲಿ ಎಫ್.ಎಂ ರೇಡಿಯೋ ಕೇಂದ್ರವನ್ನು ಆರಂಭಿಸುವಂತೆ ಹಾಗೂ ಭದ್ರಾವತಿಯಲ್ಲಿ ಈಗಿರುವ ರೇಡಿಯೋ ಕೇಂದ್ರಕ್ಕೆ ತರಂಗಾತರಗಳನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರವರು ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಎಫ್.ಎಂ ರೇಡಿಯೋ ಕೇಂದ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.

Prakash javadekar

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಾಗೂ ಶಿವಮೊಗ್ಗ ಜಿಲ್ಲೆಯ ಕೇಂದ್ರ ಸ್ಥಳವಾಗಿರುವ ಶಿವಮೊಗ್ಗದಲ್ಲಿ ಒಂದು ಎಫ್.ಎಂ ಕೇಂದ್ರ ಇರುವುದಿಲ್ಲ. ಭದ್ರಾವತಿ ಆಕಾಶವಾಣಿ ಕೇಂದ್ರವು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಶಕ್ತಿಯ ಟ್ರಾನ್ಸ್ ಮೀಟರ್ ನಿಂದಾಗಿ ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸಿದರು ಕೂಡ ಕೆಲವೇ ಕಿ.ಮಿ.ಗಳ ದೂರದಲ್ಲಿರುವ ಜಿಲ್ಲಾ ಕೇಂದ್ರಕ್ಕೂ ತಲುಪದಿರುವ ಬಗ್ಗೆ ಸಂಸದರು ಸಚಿವರ ಗಮನಕ್ಕೆ ತಂದಿದ್ದಾರೆ.

ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಡಿಮೆ ಶಕ್ತಿಯ ದೂರದರ್ಶನ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿರುವ ನಿಟ್ಟಿನಲ್ಲಿ ಹೆಚ್ಚಿನ ಶಕ್ತಿಯ ಟ್ರಾನ್ಸ್ ಮೀಟರ್ ಉನ್ನತೀಕರಿಸಿ ಇಲ್ಲಿರುವ ಸ್ಥಳವಕಾಶ ಹಾಗೂ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುವ ಹಿನ್ನೆಲೆಯಲ್ಲಿ ಈಗಿರುವ ಟ್ರಾನ್ಸ್ ಮೀಟರ್ 10ಕೆ.ವಿ.ಗೆ ಹೆಚ್ಚಿಸಿ, ಎಫ್.ಎಂ ಕೇಂದ್ರವನ್ನು ಮಂಜೂರು ಮಾಡಿದ್ದಲ್ಲಿ, ಮಲೆನಾಡಿನ ಹೆಚ್ಚಿನ ಸಂಖ್ಯೆಯ ಶಾಸ್ತ್ರೀಯ ಹಾಗೂ ಜನಪದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.

hbl joshi raghavendra

ಆಕಾಶವಾಣಿ ಕೇಂದ್ರವು ಶಿವಮೊಗ್ಗದಿಂದ 20ಕಿ.ಮೀ. ದೂರದಲ್ಲಿರುವ ಭದ್ರಾವತಿಯಲ್ಲಿದ್ದರೂ, ಅದೂ ನಗರ ವ್ಯಾಪ್ತಿ ಪ್ರದೇಶದಿಂದ 5 ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಜಿಲ್ಲಾದ್ಯಂತ ವಿವಿಧ ಭಾಗಗಳಿಂದ ಇಲ್ಲಿಗೆ ಜನರು ಬರಲು ತೊಂದರೆಯಾಗುತ್ತಿದೆ. ಅದೂ ಅಲ್ಲದೆ ಈ ಕೇಂದ್ರಕ್ಕೆ ನಿರ್ವಹಣಾಧಿಕಾರಿಗಳು ಇಲ್ಲದ ಪ್ರಯುಕ್ತ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯದಂತಾಗಿದೆ. ಹೀಗಾಗಿ ಕೂಡಲೇ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನಿಯೋಜಿಸುವಂತೆಯೂ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

ನಗರದಲ್ಲಿ ಯಾವುದೇ ರೀತಿಯ ರೇಡಿಯೋ ಚಾನೆಲ್‍ಗಳು ಇಲ್ಲದಿರುವ ಪ್ರಯುಕ್ತ, ಎಫ್.ಎಂ ಕೇಂದ್ರ ಪ್ರಾರಂಭವಾದಲ್ಲಿ ಇದೊಂದು ಅತ್ಯುತ್ತಮ ರೇಡಿಯೋ ಕೇಂದ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರಿ ಎಫ್.ಎಂ ಕೇಂದ್ರ ಸ್ಥಾಪನೆಯಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಅವುಗಳ ಉಪಯುಕ್ತತೆ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *