ನವದೆಹಲಿ: ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆ ಸೇರಿದಂತೆ ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿಯಾಗಿ ಸಂಸದ ಬಿ.ವೈ ರಾಘವೇಂದ್ರ (B Y Raghavendra) ಚರ್ಚಿಸಿದ್ದಾರೆ.
ಮಂತ್ರಾಲಯಕ್ಕೆ ಶಿವಮೊಗ್ಗ (Shivamogga) ನಗರದ ಉತ್ತರ ಭಾಗದ ಬೈಪಾಸ್ ರಸ್ತೆ ನಿರ್ಮಾಣದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ ಬೈಪಾಸ್ ರಸ್ತೆಯ ಅಗತ್ಯತೆಯನ್ನು ವಿವರಿಸಿದ ಅವರು, ಭೂಸ್ವಾದೀನ ವೆಚ್ಚದ ಪಾಲುದಾರಿಕೆ, ಮಂಜೂರಾತಿಗೆ ಇದ್ದ ಸಮಸ್ಯೆಗಳನ್ನು ವಿವರಿಸಿದ್ದಾರೆ.
ಶಿವಮೊಗ್ಗ ನಗರದಿಂದ ಹೊನ್ನಾಳಿ, ಹರಿಹರ ಮೂಲಕ ಮರಿಯಮ್ಮನ ಹಳ್ಳಿವರೆಗಿನ ರಾಜ್ಯ ಹೆದ್ದಾರಿ 25 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದಜೆಗೇರಿಸಿ 4 ಪಥದ ರಸ್ತೆ ನಿಮಾಣ ಮಾಡಲು ಸಹ ಮನವಿ ಮಾಡಿದ್ದು, ಇದೇ ವೇಳೆ ಸಿಗಂಧೂರು ಸೇತುವೆ ಮತ್ತು ವಿದ್ಯಾನಗರ ರೈಲ್ವೇ ಮೇಲ್ಸೇತುವೆಯ ನಿರ್ಮಾಣದ ಪ್ರಗತಿ ಹಾಗೂ ರಾಷ್ಟ್ರೀಯ ಹೆದ್ದಾರಿ 766ಸಿ ನ ಮಾವಿನಕೊಪ್ಪ ವೃತ್ತದಿಂದ ಆಡುಗೋಡಿವರೆಗಿನ 13.80ಕಿ.ಮೀ ಉದ್ದದ ರಸ್ತೆ ಹಾಗೂ ಬೆಕ್ಕೋಡಿ ಮತ್ತು ಹೊಸನಗರ ಸೇತುವೆಗಳ ಬಗ್ಗೆ ದಾಖಲೆಗಳೊಂದಿಗೆ ವಿವರಣೆ ನೀಡಿ ಕಾಮಗಾರಿ ಪರಿಶೀಲನೆಗೆ ಮನವಿ ಮಾಡಿದರು. ಇದನ್ನೂ ಓದಿ: ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು, ಕೇಂದ್ರ ಕೊಡಲ್ಲ ಅಂತಾ ಹೇಳ್ತಿದೆ – ಸಿಎಂ ಕಿಡಿ
ಸಂಸದರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಗಡ್ಕರಿ, ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಂಜೂರಾತಿಗೆ ಇರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ತಕ್ಷಣ ಮಂಜೂರಾತಿ ನೀಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ರಾಜ್ಯ ಹೆದ್ದಾರಿ 25 ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದಜೆಗೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಸದರಿ ರಾಜ್ಯ ಹೆದ್ದಾರಿಯನ್ನು ಮೇಲ್ದಜೆಗೇರಿಸಿ ಅಭಿವೃದ್ಧಿಗೊಳಿಸಿಕೊಡುವ ಭರವಸೆ ನೀಡಿದ್ದಾರೆ. ಇನ್ನು ಪ್ರಗತಿಯಲ್ಲಿರುವ ಕಾಮಗಾರಿಗಳ ವೀಕ್ಷಣೆಗೂ ಬರುವುದಾಗಿ ಅವರು ತಿಳಿಸಿದ್ದಾರೆ.