Connect with us

Latest

ಸಂಸತ್ತು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ರೆ ಭಾರತ ಇಸ್ರೇಲ್ ಆಗುತ್ತೆ: ಓವೈಸಿ

Published

on

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಎಐಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ ಭಾರತವು ಇಸ್ರೇಲ್ ಆಗಲಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಮಸೂದೆಯ ಮೂಲಕ ಭಾರತವನ್ನು ಧಾರ್ಮಿಕ ದೇಶವನ್ನಾಗಿ ಮಾಡಲು ಸರ್ಕಾರ ಬಯಸಿದೆ. ಈ ಮೂಲಕ ಭಾರತವು ತಾರತಮ್ಯಕ್ಕೆ ಹೆಸರುವಾಸಿಯಾದ ಇಸ್ರೇಲ್‍ನಂತಹ ದೇಶಗಳ ಸಾಲಿಗೆ ಸೇರಲಿದೆ. ಈಶಾನ್ಯ ರಾಜ್ಯಗಳಿಗೆ ವಿನಾಯಿತಿ ನೀಡುವ ವರದಿಗಳು ನಿಜವಾಗಿದ್ದರೆ, ಅದು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಏಕೆಂದರೆ ಒಂದು ದೇಶದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಎರಡು ಕಾನೂನುಗಳು ಇರಲಾರವು ಎಂದು ಓವೈಸಿ ತಿಳಿಸಿದ್ದಾರೆ.

ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಸನಾ ಇಲ್ತಿಜಾ ಜಾವೇದ್ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಜೊತೆಗೆ ಸರ್ಕಾರವು ಮಸೂದೆಯನ್ನು ಗುರುವಾರ ಅಥವಾ ಶುಕ್ರವಾರ ಮಾತ್ರ ಸಂಸತ್ತಿನಲ್ಲಿ ಮಂಡಿಸಲು ಯೋಚನೆ ನಡೆಸಿದೆ. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಸನಾ ಇಲ್ತಿಜಾ ಜಾವೇದ್, ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಭಾರತದಲ್ಲಿ ಹರಡಿರುವ ಮುಸ್ಲಿಂ ಜನಸಂಖ್ಯೆಯ ಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ. ಮುಸ್ಲಿಮರು ಸಮುದಾಯವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಮುಸ್ಲಿಮರು ದೇಶದಲ್ಲಿ ಕೆಳವರ್ಗದ ನಾಗರಿಕರಾಗಿ ಉಳಿಯುತ್ತಾರೆ ಎಂದು ದೂರಿದ್ದಾರೆ.

ಕಾಂಗ್ರೆಸ್, ಶಿವಸೇನೆ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಸ್‍ಪಿ, ಬಿಎಸ್‍ಪಿ, ಆರ್‌ಜೆಡಿ, ಸಿಪಿಐ (ಎಂ), ಎಐಎಂಐಎಂ, ಬಿಜೆಡಿ ಮತ್ತು ಅಸ್ಸಾಂನ ಬಿಜೆಪಿಯ ಮಿತ್ರ ರಾಷ್ಟ್ರಗಳು ಎಜಿಪಿ ಮಸೂದೆಯನ್ನು ವಿರೋಧಿಸುತ್ತಿವೆ. ಆದರೆ, ಅಕಾಲಿ ದಳ, ಜೆಡಿಯು ಎಐಎಡಿಎಂಕೆ ಸರ್ಕಾರದೊಂದಿಗೆ ಇವೆ. ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿಯೂ ಈ ಮಸೂದೆಯನ್ನು ವಿರೋಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಪೌರತ್ವ ಕಾನೂನು 1955ರಲ್ಲಿ ಬಂದಿದೆ. ಇದರ ಅಡಿ ಭಾರತ ಸರ್ಕಾರವು 11 ವರ್ಷಗಳ ಕಾಲ ದೇಶದಲ್ಲಿ ಉಳಿದುಕೊಂಡ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಪೌರತ್ವವನ್ನು ನೀಡುತ್ತದೆ.

ಸರ್ಕಾರ ಯಾವ ತಿದ್ದುಪಡಿ ಮಾಡಲಿದೆ?
ತಿದ್ದುಪಡಿ ಮಾಡಿದ ಮಸೂದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಪೌರತ್ವ ನೀಡುವ ಸಮಯವನ್ನು 1 ರಿಂದ 6 ವರ್ಷಕ್ಕೆ ಇಳಿಸಿದೆ. ಅಲ್ಲದೆ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಬಂದ ಮುಸ್ಲಿಮೇತರರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಮಾನ್ಯ ದಾಖಲೆಗಳಿಲ್ಲದೆ ಕಂಡುಬಂದರೂ ಅವರನ್ನು ಜೈಲಿಗೆ ಹಾಕಲಾಗುವುದಿಲ್ಲ.

ಪ್ರತಿಭಟನೆ ಯಾಕೆ?
ಸಂಸತ್ತಿನಲ್ಲಿ ಪೌರತ್ವ ಮಸೂದೆಯನ್ನು ಅಂಗೀಕರಿಸಿದರೆ, ಬಾಂಗ್ಲಾದೇಶದ ಹೆಚ್ಚಿನ ಸಂಖ್ಯೆಯ ಹಿಂದೂಗಳಿಗೆ ಪೌರತ್ವ ನೀಡುವುದರಿಂದ ಮೂಲ ನಿವಾಸಿಗಳ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ರಾಜ್ಯಗಳ ಸಾಂಸ್ಕೃತಿಕ, ಭಾಷಾ ಮತ್ತು ಸಾಂಪ್ರದಾಯಿಕ ಪರಂಪರೆಯ ಮೇಲೆ ಬಿಕ್ಕಟ್ಟನ್ನುಂಟು ಮಾಡುತ್ತದೆ ಎನ್ನುವುದು ಈಶಾನ್ಯ ರಾಜ್ಯಗಳ ದೂರಾಗಿದೆ.

ಅಸ್ಸಾಂ ಒಪ್ಪಂದ:
1971ಕ್ಕಿಂತ ಮೊದಲು ಬಂದ ಜನರಿಗೆ ಪೌರತ್ವ ನೀಡುವ ಅವಕಾಶವಿತ್ತು. ಈ ಮಸೂದೆ ಅಸ್ಸಾಂಗೆ ಸೀಮಿತವಾಗಿಲ್ಲ. ಆದರೆ ಇದು ಇಡೀ ದೇಶದಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಸರ್ಕಾರ ಹೇಳುತ್ತದೆ.

Click to comment

Leave a Reply

Your email address will not be published. Required fields are marked *