ಬೆಂಗಳೂರು: ಕರ್ನಾಟಕದ ಸಿನಿ ಅಭಿಮಾನಿಗಳಿಗೆ ಗುಡ್ ನ್ಯೂಸ್. ಗುರುವಾರದಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200 ರೂ. ನಿಗದಿಯಾಗುವ ಸಾಧ್ಯತೆಯಿದೆ.
ಫಿಲಂ ಚೇಂಬರ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು, ಬಜೆಟ್‍ನಲ್ಲಿ ಘೋಷಣೆಯಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ 200 ರೂ.ಗೆ ನಿಗದಿ ಪಡಿಸಿರುವ ಆದೇಶ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಸಹಿ ಮಾಡಿದ್ದಾರೆ. ಗುರುವಾರ ಈ ಪತ್ರ ವಾಣಿಜ್ಯ ಮಂಡಳಿಗೆ ತಲುಪಲಿದೆ. ಪತ್ರ ಬಂದ ತಕ್ಷಣವೇ ಏಕರೂಪ ದರ ಜಾರಿಯಾಗಲಿದೆ ಎಂದು ತಿಳಿಸಿದರು.
Advertisement
ಮಲ್ಟಿಪ್ಲೆಕ್ಸ್ ಗಳಲ್ಲಿ ಮಾರಾಟವಾಗುವ ತಿಂಡಿ ತಿನಿಸುಗಳಿಗೆ ಎಂಆರ್‍ಪಿ ಬಿಟ್ಟು ದುಬಾರಿ ದರ ವಿಧಿಸಬಾರದು. ಒಂದೆರಡು ರೂ. ಬೇಕಾದರೆ ಜಾಸ್ತಿ ಇಟ್ಟುಕೊಂಡು ಮಾರಾಟ ಮಾಡಿ. ಇದಕ್ಕಿಂತಲೂ ಜಾಸ್ತಿ ಹಣವನ್ನು ನಿಗದಿಪಡಿಸಿದರೆ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟಕ್ಕೆ ಇಳಿಯಲಾಗುವುದು ಎಂದು ಹೇಳಿದರು.
Advertisement
ಇಷ್ಟು ದಿನ ತಡವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ, ಉಪಚುನಾವಣಾ ನೀತಿ ಸಂಹಿತೆ ಇತ್ತು. ಇದರ ಜೊತೆ ಸಿಎಂ ಕೆಲ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದ ಕಾರಣ ಸ್ವಲ್ಪ ತಡವಾಗಿ ಜಾರಿಗೆ ಬಂದಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿತರಕ ಎನ್ ಕುಮಾರ್, ಜಾಕ್ ಮಂಜು ಉಪಸ್ಥಿತರಿದ್ದರು.
Advertisement
ಏಪ್ರಿಲ್ 26 ರಂದು 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು. ಹಾಗೆಯೇ, ಪ್ರೈಮ್ ಸಮಯದಲ್ಲಿ ಕನ್ನಡ ಚಿತ್ರಗಳಿಗಾಗಿ ಎರಡು ಶೋಗಳನ್ನ ಮೀಸಲಿಡಬೇಕು ಎಂದು ಕೂಡ ಆದೇಶಿಸುವುದಾಗಿ ತಿಳಿಸಿದ್ದರು.
Advertisement
ದರ ಕಡಿಮೆಯಾಗಿದ್ದು ಯಾಕೆ?
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನವನ್ನು ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.
ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಮುಂದಾಗಿದೆ.
ಇದನ್ನೂ ಓದಿ: ನೀರಿನ ಬಾಟಲಿಗೆ 50 ರೂ. ಸ್ವೀಕರಿಸಿದ ಐನಾಕ್ಸ್ ಮಲ್ಟಿಪ್ಲೆಕ್ಸ್ ಗೆ 5,000 ರೂ. ದಂಡ