– ಮದುವೆ ನಿಶ್ಚಯವಾದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಯುವಕ
ತಿರುವನಂತಪುರಂ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನ ಮದುವೆಗೆ ಕೇರಳ (Kerala) ಹೈಕೋರ್ಟ್ (High Court) 15 ದಿನಗಳ ಪೆರೋಲ್ ನೀಡಿದೆ.
ಅಪರಾಧಿಗೆ ಜೈಲು ಶಿಕ್ಷೆಯಾಗುವ ಮೊದಲೇ ಮದುವೆ (Marriage) ನಿಶ್ಚಯವಾಗಿತ್ತು. ಜುಲೈ 13ರಂದೇ ಮದುವೆ ನಿಶ್ಚಯ ಆಗಿತ್ತು. ಹೀಗಾಗಿ ಅವಕಾಶ ಮಾಡಿಕೊಡುವಂತೆ ಕೋರಿ ಅಪರಾಧಿ ಪ್ರಶಾಂತ್ ತಾಯಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುನ್ನಿಕೃಷ್ಣನ್ ಜುಲೈ 12 ರಿಂದ 15 ದಿನಗಳ ಕಾಲ ಅಪರಾಧಿಗೆ ಪೆರೋಲ್ ಮಂಜೂರು ಮಾಡಿ ಆದೇಶಿಸಿದ್ದಾರೆ. ಪೆರೋಲ್ ಅವಧಿ ಮುಗಿದ ಬಳಿಕ, ಜುಲೈ 26ರ ಸಂಜೆ 4 ಗಂಟೆಯೊಳಗೆ ಜೈಲಿಗೆ ಹಿಂತಿರುಗಬೇಕು ಎಂದು ಆತನಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಚುನಾವಣಾ ಆಯೋಗಕ್ಕೆ ಬಿಗ್ ರಿಲೀಫ್ – ಬಿಹಾರ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ತಡೆಗೆ ‘ಸುಪ್ರೀಂ’ ನಕಾರ
ಇದಕ್ಕೂ ಮುನ್ನ ವಿಯ್ಯರು ಜೈಲಿನ ಅಧೀಕ್ಷಕರು ಪೆರೋಲ್ ಅರ್ಜಿಯನ್ನ ವಜಾಗೊಳಿಸಿದ್ದರು. ಇದನ್ನ ಪ್ರಶ್ನಿಸಿ ಶಿಕ್ಷೆಗೊಳಗಾಗಿರುವ ಪ್ರಶಾಂತ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಮಧ್ಯೆ ಹುಡುಗಿ ಅಪರಾಧಿಯನ್ನೇ ಮದುವೆಯಾಗಲು ನಿರ್ಧರಿಸಿರುವುದರಿಂದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಪೆರೋಲ್ ಮಂಜೂರು ಮಾಡಿದ್ದಾರೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರವೂ ಅವಳ ಪ್ರೀತಿ ಹಾಗೆಯೇ ಇದೆ. ತನ್ನ ಸಂಗಾತಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದಾನೆ ಎಂದು ತಿಳಿದಿದ್ದರೂ ಆಕೆ ಮದುವೆಯಾಗಲು ಸಿದ್ಧವಾಗಿದ್ದಾಳೆ. ಆಕೆಯ ಧೈರ್ಯವನ್ನ ಕೋರ್ಟ್ ನಿರ್ಲಕ್ಷಿಸುವುದಿಲ್ಲ ಎಂದು ಪೀಠ ಹೇಳಿದೆ.
ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಅಪರಾಧಿಗೆ 15 ದಿನಗಳ ಅವಧಿಗೆ ಪೆರೋಲ್ ನೀಡಲಾಗಿದೆ. ಅಲ್ಲದೇ ಆ ಯುವತಿಯ ವೈವಾಹಿಕ ಜೀವನ ಸಂತೋಷವಾಗಿರಲಿ ಎಂದು ನ್ಯಾಯಾಲಯ ಹಾರೈಸಿದೆ. ಇದನ್ನೂ ಓದಿ: ಟೆನ್ನಿಸ್ ಆಟಗಾರ್ತಿಯನ್ನು ಕೊಂದ ಅಪ್ಪನಿಗೆ 14 ದಿನ ನ್ಯಾಯಾಂಗ ಬಂಧನ