ಹುಬ್ಬಳ್ಳಿ: ನಗರದ ಗಣೇಶ್ ಪೇಟೆ ಪಾಕಿಸ್ತಾನದ ಹಾಗೆ ಕಾಣುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖೈರಾತಿಯನ್ನು ನಾಲ್ಕನೇ ಜೆಎಂಎಫ್‍ಸಿ ನ್ಯಾಯಾಧೀಶೆ ದೀಪ್ತಿ ನಾಡಗೌಡ ಅವರೆದುರು ಹಾಜರುಪಡಿಸಲಾಗಿದ್ದು, 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೌಲ್ವಿ ವಿರುದ್ಧ ಶಾಂತಿ ಭಂಗ ಮತ್ತು ಪ್ರಚೋದನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿತ್ತು.
Advertisement
Advertisement
ಏನಿದು ಪ್ರಕರಣ?: ನಗರದ ಗಣೇಶ್ ಪೇಟೆಯಲ್ಲಿ ಶನಿವಾರ ನಡೆದ ಈದ್ ಮಿಲಾದ್ ಹಬ್ಬದ ವೇಳೆ ಗಣೇಶ ಪೇಟೆಯ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಎನ್ನುವ ಮೌಲ್ವಿ, ಗಣೇಶ ಪೇಟೆ ನನಗೆ ಪಾಕಿಸ್ತಾನದಂತೆ ಕಾಣುತ್ತದೆ. ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ. ನಾವು ಒಗ್ಗಟ್ಟಿನಿಂದ ಹಾಗೂ ಎದೆ ಸೆಟೆದು ನಡೆದರೆ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
Advertisement
ಮೌಲ್ವಿಯ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಮೌಲ್ವಿ ಈ ರೀತಿ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲೇ ಉತ್ತರ ವಲಯ ಎಸಿಪಿ ದಾವೂದ್ ಖಾನ್ ಹಾಗೂ ಪೊಲೀಸರು ಇದ್ದರು. ಪೊಲೀಸರ ಎದುರು ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಪೊಲೀಸರು ಸುಮ್ಮನೆ ಕುಳಿತುಕೊಂಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
Advertisement