ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿಯಲ್ಲಿ (Chamoli Landslide) ಸಂಭವಿಸಿದ ಭೂಕುಸಿತದ ಅವಶೇಷಗಳ ಅಡಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ವಿಪತ್ತು ಪೀಡಿತ ಚಮೋಲಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಮಹಿಳೆಯ ಪತಿ ಕುನ್ವರ್ ಸಿಂಗ್ ಅವರನ್ನು ಅವಶೇಷಗಳಿಂದ ಪವಾಡಸದೃಶವಾಗಿ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಟ್ರಕ್ ಡ್ರೈವರ್ ಕಿಡ್ನ್ಯಾಪ್ ಕೇಸ್ – ಪೂಜಾ ಖೇಡ್ಕರ್ ಕಾರು ಚಾಲಕ ಅರೆಸ್ಟ್
ಭಾರೀ ಮಳೆ ಮತ್ತು ಮೇಘಸ್ಫೋಟದಿಂದಾಗಿ ಜಿಲ್ಲೆಯ ನಂದನಗರ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. 38 ವರ್ಷದ ಮಹಿಳೆ ತನ್ನ 10 ವರ್ಷದ ಮಕ್ಕಳಾದ ವಿಶಾಲ್ ಮತ್ತು ವಿಕಾಸ್ ಅಪ್ಪಿಕೊಂಡೇ ಪ್ರಾಣಬಿಟ್ಟಿದ್ದಾರೆ. ವಿಪತ್ತು ಸಂಭವಿಸಿದ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ತಾಯಿ ಪ್ರಯತ್ನ ನಡೆಸಿದ್ದರು.
ಬುಧವಾರ ಈ ಪ್ರದೇಶದಲ್ಲಿ ಸಂಭವಿಸಿದ ವಿಪತ್ತಿನ ನಂತರ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿವೆ. ಹಠಾತ್ ಪ್ರವಾಹ ಮತ್ತು ಭೂಕುಸಿತಗಳು ಮೂಲಸೌಕರ್ಯಗಳಿಗೆ ಭಾರಿ ಹಾನಿಯುಂಟು ಮಾಡಿವೆ. ಸ್ಥಳಾಂತರಗೊಂಡ ಕುಟುಂಬಗಳಿಗಾಗಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ. ಇದನ್ನೂ ಓದಿ: ತಮಿಳುನಾಡು | ರಾಜೀವ್ ಗಾಂಧಿ ಹಂತಕನನ್ನ ಹಾಡಿ ಹೊಗಳಿದ ದಳಪತಿ ವಿಜಯ್