ನವದೆಹಲಿ: ತಾಯಿ ಹಾಗೂ ಅಪ್ರಾಪ್ತ ಮಗ ಶವವಾಗಿ ಪತ್ತೆಯಾದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಜಹಾಂಗೀರ್ ಪುರಿಯಲ್ಲಿ ನಡೆದಿದೆ.
ಪೂಜಾ(36) ಹಾಗೂ ಹರ್ಷ್ (12) ಕೊಲೆಯಾದ ತಾಯಿ-ಮಗ. ಪೂಜಾಳ ಬೆನ್ನ ಹಿಂದೆ ಚಾಕು ಇರಿಯಲಾಗಿದ್ದು, 12 ವರ್ಷದ ಹರ್ಷ್ ನನ್ನು ಚೂಪಾದ ವಸ್ತುವಿನಿಂದ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪರಿಚಯವಿರುವ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ವಿಜಯಾಂತ ಆರ್ಯ, ಮಂಗಳವಾರ ಬೆಳಗ್ಗೆ ಸುಮಾರು 10 ಗಂಟೆಗೆ ಸ್ಥಳೀಯರು ಪೂಜಾಳ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನಮಗೆ ಕರೆ ಮಾಡಿದ್ದರು. ಆಗ ನಾವು ಸ್ಥಳಕ್ಕೆ ಭೇಟಿ ನೀಡಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದಾಗ ಒಂದು ರೂಮಿನಲ್ಲಿ ತಾಯಿಯ ಮೃತದೇಹ ಹಾಗೂ ಮತ್ತೊಂದು ರೂಮಿನಲ್ಲಿ ಮಗನ ಮೃತದೇಹ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.
ಮಹಿಳೆ ವಿಧವೆಯಾಗಿದ್ದು, ಆಕೆ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆಕೆಯ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ತಾಯಿ-ಮಗನ ಮೃತದೇಹವನ್ನು ಬಾಬು ಜಗ್‍ಜೀವನ್ ರಾಮ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಪ್ರಾಥಮಿಕ ತನಿಖೆಯ ಪ್ರಕಾರ, ಪೂಜಾಳ ಮನೆ ಎರಡು ದಿನಗಳಿಂದ ಬೀಗ ಹಾಕಲಾಗಿದ್ದು, ಈ ಘಟನೆ ಜನವರಿ 16ರಿಂದ 18ರ ಒಳಗೆ ನಡೆದಿದೆ ಎಂಬುದು ತಿಳಿದು ಬಂದಿದೆ.
ಸದ್ಯ ಪೊಲೀಸರು ಜಹಾಂಗೀರ್ ಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.