ರಾಮನಗರ: ಹಣದ (Money) ಆಸೆಗೆ ಬಿದ್ದ ತಾಯಿಯೋರ್ವಳು ತನ್ನ ಗಂಡನಿಗೂ ತಿಳಿಸದೇ ಹೆತ್ತ ಮಗುವನ್ನೇ (Child) ಮಾರಾಟ ಮಾಡಿರುವ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ. ಈ ಸಂಬಂಧ ಪತ್ನಿಯ ವಿರುದ್ಧ ಪತಿಯೇ ದೂರು ನೀಡಿದ್ದು, ಪತ್ನಿ ಹಾಗೂ ಇತರೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಯಾರಬ್ ನಗರ ನಿವಾಸಿ ಸದ್ದಾಂ ಪಾಷಾ ಹಾಗೂ ನಸ್ರೀನ್ ತಾಜ್ ಕಳೆದ 6 ವರ್ಷಗಳ ಹಿಂದೆ ಮದುವೆ ಆಗಿದ್ದರು. ಅವಳಿ ಮಕ್ಕಳು ಸೇರಿ ಒಟ್ಟು 4 ಮಕ್ಕಳಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಸದ್ದಾಂ ಬಡತನದಲ್ಲಿ ಜೀವನ ನಡೆಸುತ್ತಿದ್ದರು. ಕಳೆದ 30 ದಿನಗಳ ಹಿಂದೆ ದಂಪತಿಗೆ ಗಂಡು ಮಗು ಜನಿಸಿತ್ತು. ಸದ್ದಾಂ ಕೆಲ ಕೈಸಾಲ ಕೂಡಾ ಮಾಡಿಕೊಂಡಿದ್ದ ಹಿನ್ನೆಲೆ ಈ ಸಾಲ ತೀರಿಸುವ ಸಂಬಂಧ ಕೊನೆಯ ಮಗುವನ್ನು ಮಾರಾಟ ಮಾಡುವಂತೆ ನಸ್ರೀನ್, ಸದ್ದಾಂಗೆ ಪೀಡಿಸುತ್ತಲೇ ಬಂದಿದ್ದಳು. ಆದರೆ, ಸದ್ದಾಂ ಪತ್ನಿಯ ಮಾತನ್ನು ತಿರಸ್ಕರಿಸಿದ್ದ. ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಸಿಎಂ
ಕೊನೆಗೆ ಡಿ.5ಕ್ಕೆ ಪತಿ ಕೆಲಸಕ್ಕೆ ಹೋಗಿದ್ದನ್ನು ಬಳಸಿಕೊಂಡ ನಸ್ರೀನ್ ಸ್ಥಳೀಯ ಅಸ್ಲಾಂ ಹಾಗೂ ಫಾಹಿಮಾ ಸಹಾಯದೊಂದಿಗೆ ಬೆಂಗಳೂರಿನ ನಿವಾಸಿ ತರ್ನಮ್ ಸುಲ್ತಾನ್ ಎಂಬವರಿಗೆ ಗಂಡು ಮಗುವನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ. ಇನ್ನು ಪತಿ ಸದ್ದಾಂ ಪಾಷಾ ಕೆಲಸ ಮುಗಿಸಿ ಮನೆಗೆ ಬಂದ ಸಂದರ್ಭದಲ್ಲಿ ಮಗುವಿನ ಕುರಿತು ವಿಚಾರಿಸಿದ್ದಾನೆ. ಈ ವೇಳೆ ನಸ್ರೀನ್ ಮಗುವಿಗೆ ಹುಷಾರಿಲ್ಲ ಸಂಬಂಧಿಕರು ಕರೆದುಕೊಂಡು ಹೋಗಿದ್ದು, ಬೆಳಗ್ಗೆ ವಾಪಸ್ ಬಿಡುತ್ತಾರೆ ಎಂದು ಸಮಜಾಯಿಷಿ ನೀಡಿದ್ಧಾಳೆ. ಪತ್ನಿಯ ಮಾತನ್ನು ನಂಬಿದ್ದ ಸದ್ದಾಂ ಪಾಷಾ ಊಟ ಮುಗಿಸಿ ಮಲಗಿದ್ದ. ಮಾರನೆಯ ದಿನವೂ ಮಗುವಿಗಾಗಿ ದಂಪತಿಗಳ ನಡುವೆ ಗಲಾಟೆಯಾಗಿದ್ದು, ಇದರಿಂದ ಸದ್ದಾಂ ತಲೆಗೆ ಪೆಟ್ಟು ಬಿದ್ದಿದೆ. ಇದನ್ನೂ ಓದಿ: ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿ.7ರಂದು ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಸದ್ದಾಂ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಮನಗರ ಟೌನ್ ಪೊಲೀಸರು, ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ತಾಯಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ