ಹುಬ್ಬಳ್ಳಿ: ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕಳುಹಿಸಿ ಎಂದು ಪೋಷಕರ ಬಳಿ ವಿನಂತಿ ಮಾಡಿದ ಶಿಕ್ಷಕಿಯರಿಗೆ ತಾಯಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಮಾಡಿದೆ. ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ತಕ್ಕಂತೆ ಶಿಕ್ಷಕರು ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹೀಗೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕರೆಯಲು ಹೋದ ಶಿಕ್ಷಕಿಯರಿಗೆ ಕಹಿ ಅನುಭವವಾಗಿದೆ.
ಪಾಲಕರ ನಿಷ್ಕಾಳಜಿಯಿಂದಾಗಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಘಟನೆಯ ವಿಡಿಯೋ ಆಗಿದ್ದು, ನಡೆದಿದ್ದು ಎಲ್ಲಿ? ಯಾವ ಜಿಲ್ಲೆ ಎನ್ನುವ ಖಚಿತ ಮಾಹಿತಿ ದೊರಕಿಲ್ಲ. ಆದ್ರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿ ತಾಯಿಯೊಬ್ಬರು ಮಗಳನ್ನು ಶಾಲೆಗೆ ಕರೆದೊಯ್ಯಲು ಬಂದಿದ್ದ ಶಿಕ್ಷಕಿಯರಿಗೆ ಹಿಗ್ಗಾಮುಗ್ಗಾ ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿದ್ದಾರೆ. ಅಲ್ಲದೆ ಸುಮ್ಮನೆ ಹೋಗಿ, ಶಾಲೆ ಕಲಿಯದಿದ್ದರೆ ಏನಾಗುತ್ತೆ? ನನ್ನ ಮಗಳನ್ನು ನಾನು ಶಾಲೆಗೆ ಕಳುಹಿಸಲ್ಲ. ಏನು ಜೈಲಿಗೆ ಹಾಕ್ಕುತ್ತೀರಾ ಎಂದು ಪ್ರಶ್ನಿಸಿ, ಶಿಕ್ಷಕರಿಗೆ ಹೊಡೆಯುವುದಾಗಿ ಅವಾಜ್ ಹಾಕಿದ್ದಾರೆ.
ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂಬ ಸದುದ್ದೇಶದಿಂದ ಶಿಕ್ಷಕಿಯರು ಪರಿಪರಿಯಾಗಿ ತಾಯಿಯನ್ನು ಅಂಗಲಾಚಿದರೂ ಕೂಡ ಆ ತಾಯಿ ಯಾವುದೇ ಕಾರಣಕ್ಕೂ ನನ್ನ ಮಗಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಶಿಕ್ಷಕರಿಗೆ ಬಾಯಿಗೆ ಬಂದ ಹಾಗೆ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.