CrimeLatestMain PostNational

ಗಂಡು ಮಗುವಿಗೆ ಜನ್ಮ ನೀಡಿ 7 ಹೆಣ್ಮಕ್ಕಳ ತಾಯಿ ದುರ್ಮರಣ!

ಔರಂಗಾಬಾದ್(ಮುಂಬೈ): ಗಂಡು ಮಗು ಬೇಕು ಅನ್ನೋ ಮನೆ ಹಿರಿಯರ ಹಠದಿಂದಾಗಿ 7 ಹೆಣ್ಣು ಮಕ್ಕಳಿದ್ದ ಮಹಿಳೆ ಕೊನೆಗೂ ಪುತ್ರನಿಗೆ ಜನ್ಮ ನೀಡಿ ಮೃತಪಟ್ಟ ದಾರುಣ ಘಟನೆ ಔರಂಗಾಬಾದ್ ನಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರ ರಾತ್ರಿ ಬೀಡ್ ಜಿಲ್ಲೆಯ ಮಜಲ್ ಗಾಂವ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. 38 ವರ್ಷದ ಮಹಿಳೆ ತನ್ನ 10ನೇ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಬಳಿಕ ಸಾವನ್ನಪ್ಪಿದ್ದಾರೆ.

ಘಟನೆ ವಿವರ:
ಮಹಿಳೆಗೆ ಈಗಾಗಲೇ 7 ಮಂದಿ ಪುತ್ರಿಯರಿದ್ದಾರೆ. ಆದ್ರೆ ಮನೆಯವರು ಮಾತ್ರ ಪುತ್ರ ಸಂತಾನ ಬೇಕು ಅಂತ ಹಠ ಹಿಡಿದಿದ್ದಾರೆ. ಅಲ್ಲದೇ 7 ಹೆಣ್ಣು ಮಕ್ಕಳಾದ ಬಳಿಕ 2 ಬಾರಿ ಗರ್ಭಪಾತವನ್ನೂ ಮಾಡಿಸಿದ್ದಾರೆ. 10ನೇ ಮಗು ಗಂಡು ಅಂತ ತಿಳಿದ ಬಳಿಕ ಹೆರಿಗೆ ಮಾಡಿಸಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

ಮಹಿಳೆ ಹೆರಿಗೆಗಾಗಿ ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಗಂಡು ಶಿಶುಗೆ ಜನ್ಮವನ್ನೂ ನೀಡಿದ್ದಾರೆ. ಮಗುವಿನ ಜನನವಾದ ತಕ್ಷಣವೇ ಮಹಿಳೆಗೆ ವಿಪರೀತ ರಕ್ತಸ್ತ್ರಾವ ಆರಂಭವಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಪುತ್ರನಿಗೆ ಜನ್ಮ ನೀಡಿದ 24 ಗಂಟೆಯಲ್ಲಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಅಂತ ಆಸ್ಪತ್ರೆಯ ವೈದ್ಯ ಗಜಾನನ ರುದ್ರವರ್ ತಿಳಿಸಿದ್ದಾರೆ.

ಮಹಿಳೆಗೆ ರಕ್ರಸ್ರಾವವಾಗುತ್ತಿದ್ದಂತೆಯೇ ಕೂಡಲೇ ನಾವು ಬೇರೆ ವೈದ್ಯರ ಸಹಾಯ ಪಡೆದೆವು. ಆದ್ರೆ ನಮಗೆ ಮಹಿಳೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆರಿಗೆ ರೂಮಿನಲ್ಲಿ ನಾಲ್ವರು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾದವು. ಪ್ರಸವದ ವಿಪರೀತ ರಕ್ತಸ್ರಾವವಾದ್ದರಿಂದ ನಮ್ಮ ಯಾವ ಪ್ರಯತ್ನಗಳು ಸಫಲತೆ ಕಂಡಿಲ್ಲ ಅಂತ ಅವರು ವಿವರಿಸಿದ್ರು.

2 ಬಾರಿ ಗರ್ಭಿಣಿಯಾದ ಮಹಿಳೆಯನ್ನ ಹೇಗಾದ್ರೂ ಮಾಡಿ ಬದುಕಿಸಿಕೊಳ್ಳಬಹುದಿತ್ತು. ಆದ್ರೆ ಇವರಿಗೆ ಇದು 10ನೇ ಹೆರಿಗೆಯಾಗಿತ್ತು. ಹೀಗಾಗಿ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ನಡೆಸಿದ್ರೂ ಕೈಗೂಡಲಿಲ್ಲ. ಅವರಿಗೆ 2 ಯೂನಿಟ್ ರಕ್ತವನ್ನೂ ನೀಡಿದ್ದೆವು ಅಂತ ಹೇಳಿದ್ರು.

ಮಹಿಳೆಯ ಪತಿ ಒಂದು ಸಣ್ಣ ಅಂಗಡಿಯನ್ನು ಇಟ್ಟುಕೊಂಡಿದ್ದು, ಅದರಿಂದ ಬಂದ ಹಣದಲ್ಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಮಗಳು ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಅಂತ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button