ಮುಂಬೈ: ಪೋರ್ಶೆ ಕಾರು ಡಿಕ್ಕಿ (Porsche Crash Case) ಹೊಡೆದು ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕಾರು ಚಲಾಯಿಸಿದ್ದ ಆರೋಪಿ ಅಪ್ರಾಪ್ತನ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಸಂಭವಿಸಿದಾಗ ತನ್ನ ಮಗ ಕುಡಿದಿರಲಿಲ್ಲ ಎಂದು ಸಾಬೀತುಪಡಿಸಲು ತಾಯಿ ತನ್ನ ರಕ್ತದ ಮಾದರಿಯನ್ನು ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಕೇಸ್; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ
ಅಪ್ರಾಪ್ತನ ರಕ್ತದ ಮಾದರಿ ಬದಲಿಗೆ ಆತನ ತಾಯಿಯ ರಕ್ತದ ಮಾದರಿಯನ್ನು ಪರೀಕ್ಷೆ ವೇಳೆ ಬದಲಾಯಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಪಾನಮತ್ತರಾಗಿ ಪೋರ್ಶೆ ಕಾರು ಚಲಾಯಿಸಿದ ಕಾರಣ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಅಪ್ರಾಪ್ತನ ಕುಟುಂಬದ ಚಾಲಕನನ್ನು ಅಪಹರಿಸಿ ತಾನೇ ತಪ್ಪು ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಲಾಗಿತ್ತು. ಈ ಆರೋಪದಲ್ಲಿ ಈಗಾಗಲೇ ಬಾಲಕನ ತಂದೆ ಮತ್ತು ತಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ
ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ನಡೆಸಿದ ಪ್ರಯತ್ನಗಳು ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯಲ್ಲಿ ಅಪ್ರಾಪ್ತನ ವೈದ್ಯಕೀಯ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿವೆ.