ಜೈಪುರ: ರಾಜಸ್ಥಾನದ ತಾಯಿಯೊಬ್ಬರು ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ಬೈ ಹೇಳಿ ಜಮೀನಿನಲ್ಲಿ ದುಡಿಯುತ್ತಿದ್ದಾರೆ.
ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ.
Advertisement
Advertisement
ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿರಬಹುದು. ದುಡ್ಡು ಇದ್ದರೆ ಏನಂತೆ ನಾವು ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ. ಈ ನಡುವೆ ಮನೆಯೊಳಗೆ ಬಿಸಿಲು ಕೂಡ ಬರುವುದಿಲ್ಲ. ಹೀಗಿರುವಾಗ ಎಷ್ಟು ಸಂಪಾದನೆ ಮಾಡಿದರೂ ಪ್ರಯೋಜನ ಏನು? ಈ ಕಾರಣದಿಂದಾಗಿ ನಾವು ನಮ್ಮ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿದ್ದೇವೆ ಎಂದು ದಂಪತಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.
Advertisement
2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು “ಇದು ತಪ್ಪು ನಿರ್ಧಾರ” ಎಂದು ಹೇಳಿದರು. ಆದರೆ ಮಗನಿಗೆ ಆರೋಗ್ಯಕರ ಮತ್ತು ಸ್ವಚ್ಛ ಜೀವನವನ್ನು ನೀಡಲು ನಾನು ತೆಗೆದುಕೊಂಡ ನಿರ್ಧಾರ ಸರಿ ಎಂದು ಅವರಿಗೆ ಹೇಳಿದೆ ಎಂಬುದಾಗಿ ಚಂಚಲ್ ಹೇಳಿದರು.
Advertisement
2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈಯಿಂಗ್ ಕಲಿತಿದ್ದಾರೆ.
ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಎಂದು ರಾಜೇಂದ್ರ ಹಾಗೂ ಚಂಚಲ್ ಚಿಂತಿಸುತ್ತಿದ್ದರು. ಆದರೆ ಗುರುಭಕ್ಷ್ ಈ ಹೊಸ ಜೀವನದಿಂದ ಖುಷಿಯಾಗಿದ್ದ. ಈಗ ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಆತ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು, ಗುರುಭಕ್ಷ್ ಅವರಿಗೆ ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಸುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಹಣವನ್ನು ಸಂಪಾದಿಸುವಾಗ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ನಾವು ಯಾವಾಗಲೂ ನಮ್ಮ ಮಗನಿಗೆ ನೀನು ಯಾವುದೇ ರೇಸ್‍ನಲ್ಲಿ ಇಲ್ಲ. ನೀನು ಯಾರಿಂದಲೂ ಮುಂದೆ ಅಥವಾ ಹಿಂದಕ್ಕೆ ನಡೆಯಬೇಕಿಲ್ಲ. ಕೇವಲ ತನ್ನ ವೇಗದಲ್ಲಿ ನಡೆಯಬೇಕು ಎಂದು ಹೇಳುತ್ತಿರುತ್ತೇವೆ ಅಂತಾ ರಾಜೇಂದ್ರ ಹಾಗೂ ಚಂಚಲ್ ತಿಳಿಸಿದ್ದಾರೆ.
ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಒಬ್ಬರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ರಾಜೇಂದ್ರ ಉದ್ಯೋಗದಿಂದಾಗಿ ಇಂದೋರ್ ಮನೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ. ಪತಿ ಮನೆಯಲ್ಲಿ ಇಲ್ಲದೇ ಇದ್ದರೂ ಚಂಚಲ್, ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ.