ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಇಂದು ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕನ್ನಡ ಭಾಷಿಕರು ನಿಪುಣರು, ಪರಿಣಿತರು, ಚತುರರು ಮತ್ತು ಕಾವ್ಯಪ್ರಯೋಗ ಶಕ್ತಿಉಳ್ಳವರು ಆಗಿದ್ದರೆಂದು ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿನದತ್ತ ಹಡಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಷೆ ವಿಗ್ರಹವಾದರೆ, ಲಿಪಿ ಉತ್ಸವ ಮೂರ್ತಿಯಾಗಿದೆ. ಹೊಳೆಯು ಪ್ರಕಾಶಿಸುವ ಅಭಿಪ್ರಾಯ ಮತ್ತು ಮನೋಭಾವನೆಗಳನ್ನು ವ್ಯಕ್ತಪಡಿಸುವ ಮಹತ್ತರವಾದ ಸಾಧನ ಭಾಷೆಯಾಗಿದೆ. ಭಾಷೆಯೆಂಬುದು ಸಂಸ್ಕೃತದ ಪದವಾಗಿದ್ದು, ಕನ್ನಡದಲ್ಲಿ ಭಾಷೆ, ನುಡಿ, ಮಾತು ಎಂಬೆಲ್ಲ ಪದಗಳಿಂದ ಗುರುತಿಸಲಾಗಿದೆ. ಬಾಯಿಮಾತಿನಲ್ಲಿ ಇದ್ದ ಕನ್ನಡದ ಮೊದಲ ಲಿಪಿಯ ರೂಪ ಹಲ್ಮಿಡಿ ಶಾಸನವಾಗಿದೆ. ರಾಷ್ಟ್ರಭಾಷೆ, ರಾಜಭಾಷೆ ಮತ್ತು ದೇವಭಾಷೆಗಳ ಅಬ್ಬರದಲ್ಲಿ ಮತ್ತು ಪರಭಾಷಾ ವ್ಯಾಮೋಹದಿಂದ ಕನ್ನಡ ಸೊರಗುತ್ತಿದೆ ಎಂದು ಜಿನದತ್ತ ಅವರು ಆತಂಕ ವ್ಯಕ್ತಪಡಿಸಿದರು.
Advertisement
Advertisement
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ (ಪ್ರ) ಪ್ರೊ. ಡಿ.ಬಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಾತೃ ಭಾಷೆಯನ್ನು ನೆನಪಿಸುವ ದಿನಾಚರಣೆ ಆಚರಿಸುವ ಸ್ಥಿತಿ ಬಂದಿದೆ ಎಂದರೆ ಭಾರತದ ಭಾಷೆಗಳ ಸ್ಥಿತಿಯ ಅವಲೋಕನ ಮಾಡುವಂತದ್ದು ಅವಶ್ಯಕವಾಗಿದೆ. ವಿಶ್ವವೇ ಒಂದು ಪುಟ್ಟ ಗ್ರಾಮವೆಂಬ ಪರಿಕಲ್ಪನೆ ಬಂದ ನಂತರ ಜಾಗತೀಕರಣ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಭರಾಟೆಯಲ್ಲಿ ಭಾರತದ ಭಾಷೆಗಳು ನಲುಗುತ್ತಿವೆ ಎಂದು ವಿಷಾದಿಸಿದರು.
Advertisement
ಕರ್ನಾಟಕದಲ್ಲಿ ಆಡು ಭಾಷೆ, ಉಪ ಭಾಷೆ ಹಾಗೂ ನುಡಿ ಭಾಷೆ ಬಳಕೆಯನ್ನು ಕಾಣಬಹುದು. ಎಷ್ಟು ಭಾಷೆಗಳಿವೆಯೋ ಅಷ್ಟು ಸಂಸ್ಕøತಿಯನ್ನು ನಾವು ಕಾಣಬಹುದಾಗಿದೆ. ಮಾತೃ ಭಾಷೆಯೆಂದರೆ ತಾಯಿಯ ಭಾಷೆಯಾಗಿದ್ದು, ವ್ಯವಹಾರಿಕ ಭಾಷೆಯನ್ನು ಸಾಕು ತಾಯಿಯ ಸ್ಥಾನದಲ್ಲಿ ನೋಡಬಹುದಾಗಿದೆ. ಮಾತೃ ಭಾಷೆಯಲ್ಲಿ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಮನ ಮುಟ್ಟುವಂತೆ ಸಂವಹನಿಸಬಹುದಾಗಿದೆ. ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕೇ ಹೊರತಾಗಿ ದುರಾಭಿಮಾನ ಸಲ್ಲದು ಎಂದು ಡಿ.ಬಿ.ನಾಯಕ್ ಕಿವಿಮಾತು ಹೇಳಿದರು.
Advertisement
ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಿ. ಮುರಹರಿ ನಾಯ್ಕ ಇವರು ಮಾತನಾಡಿ, ಭಾಷೆ ಇಲ್ಲದೇ ನಾಗರೀಕತೆ ಬೆಳವಣಿಗೆ ಅಸಾಧ್ಯ. ಮನುಷ್ಯನ ಬೇಕು ಬೇಡಗಳ ಈಡೇರಿಕೆಗೆ ಭಾಷೆ ಸಹಕಾರಿ ಮಾತೃ ಭಾಷೆಗೆ ಪ್ರಾಧ್ಯಾನ್ಯತೆ ದೊರೆಯಬೇಕು. ವ್ಯವಹಾರಿಕ ಭಾಷೆಗೆ ಅವಶ್ಯಕತೆಗೆ ತಕ್ಕ ಪ್ರಾಮುಖ್ಯತೆ ದೊರೆಯಲಿ. ಲಿಪಿ ಇಲ್ಲದ ಭಾಷೆಗಳ ಉಳಿವಿಗೆ ಸಾಕಷ್ಟು ಸವಾಲುಗಳು ಎದುರಾಗಿವೆ ಎಂದು ಹೇಳಿದರು.
ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿ ಶ್ರೀ ಮಾಳಗಿ ದೇವೇಂದ್ರಪ್ಪ ಅವರು ಪ್ರಥಮ ಸ್ಥಾನಗಳಿಸಿದ್ದು, ಎಂ.ಬಿ.ಎ. ವಿಭಾಗದ ಕು. ಶ್ರೀದೇವಿ ಹನಗೋಡಿಮಠ ದ್ವೀತಿಯ ಸ್ಥಾನ, ಜನಪದ ಮಾಧ್ಯಮ ಮತ್ತು ಸಂವಹನ ವಿಭಾಗದ ಶ್ರೀ ಈರಣ್ಣ ಬಿ.ಎಲ್. ತೃತೀಯ ಸ್ಥಾನ ಗಳಿಸಿದರು. ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀ ಈರಣ್ಣ ಬಿ.ಎಲ್. ಪ್ರಥಮ ಸ್ಥಾನ, ಕು.ಶ್ರೀದೇವಿ ಹನಗೋಡಿ ಮಠ ದ್ವಿತೀಯ ಸ್ಥಾನ ಹಾಗೂ ಶ್ರೀ ಶಶಿಧರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ.ಜಿನದತ್ತ ಹಡಗಲಿ ಅವರನ್ನು ಸನ್ಮಾನಿಸಲಾಯಿತು.