ಭೋಪಾಲ್: ತಾಯಿಯೊಬ್ಬಳು ಏಳು ತಿಂಗಳ ಹಸುಕೂಸನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.
ಮಗವನ್ನು ಕೊಲೆ ಮಾಡಿದ ತಾಯಿ ಕಾರಣವನ್ನು ಹೇಳಿದ ಬಳಿಕ ಕಣ್ಣಲ್ಲಿ ನೀರು ತರಿಸುತ್ತದೆ. ಮೃತ ಮಗು ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಆದರೆ ಮಗುವಿಗೆ ಚಿಕಿತ್ಸೆ ಕೊಡಿಸಲು ತಾಯಿ ಬಳಿ ಹಣವಿರಲಿಲ್ಲ. ಇದರಿಂದ ನೊಂದ ತಾಯಿ ಮಗುವನ್ನು ಹತ್ಯೆಗೈದಿದ್ದಾಳೆ.
ಆರೋಪಿಯನ್ನು ಮಾಯಾ ಡಾಂಗೊರೆ ಎಂದು ಗುರುತಿಸಲಾಗಿದೆ. ಈಕೆ ಅಹ್ಮದ್ಪರ್ ಖೈಗಾನ್ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆಕೆ ಸಂಪಾದನೆ ಮಾಡಿದ ಹಣ ಪ್ರತಿದಿನ ಮನೆಯ ಖರ್ಚಿಗೆ ಮಾತ್ರ ಸಾಕಾಗುತ್ತಿತ್ತು. ಈಕೆ 6 ವರ್ಷದ ಹಿಂದೆ ಒಂದು ಹೆಣ್ಣು ಮಗುವಾಗಿತ್ತು. ಈಗ 7 ತಿಂಗಳ ಹಿಂದೆಯೂ ಮತ್ತೊಂದು ಹೆಣ್ಣು ಮಗುವಾಗಿದೆ.
ಆರೋಪಿ ಮಾಯಾ ತನ್ನ ಮಗುವನ್ನು ಮಧ್ಯಾಹ್ನದಿಂದ ಸಂಜೆಯವರೆಗೂ ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿದ್ದಳು. ಆದರೆ ಅವರ ಮನೆಯಲ್ಲಿ ಏನೋ ವಾಸನೆ ಬರುತ್ತಿದೆ ಎಂದು ಸ್ಥಳೀಯರು ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮಾಯಾಗೆ ಎರಡನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ಪತಿ ಆಕೆಯ ಜೊತೆ ದಿನಾವೂ ಜಗಳವಾಡುತ್ತಿದ್ದನು. ಅಷ್ಟೇ ಅಲ್ಲದೇ 5 ದಿನಗಳ ಹಿಂದೆ ಮಾಯಾ ಮತ್ತು ಹಿರಿಯ ಮಗಳಿಗೆ ಹೊಡೆದು ಮನೆಬಿಟ್ಟು ಹೋಗಿದ್ದನು. ಕೊನೆಗೆ ತನ್ನ ಎರಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಾಯಾ ಮೇಲಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ 7 ತಿಂಗಳ ಮಗುವಿಗೆ ಕಾಯಿಲೆ ಬಂದಿದೆ.
ತನ್ನ ಮಗವನ್ನು ಉಳಿಸಿಕೊಳ್ಳಬೇಕು ಎಂದು ಮಾಯಾ ಆಸ್ಪತ್ರೆಗೆ ತೋರಿಸಲು ಹಣದ ವ್ಯವಸ್ಥೆ ಮಾಡಲು ಕಷ್ಟಪಟ್ಟಿದ್ದಾಳೆ. ಆದರೆ ಯಾರೊಬ್ಬರು ಆಕೆಗೆ ಸಹಾಯ ಮಾಡಲಿಲ್ಲ. ಕೊನೆಗೆ ಮಗುವನ್ನು ಹತ್ಯೆ ಮಾಡಿದ್ದಾಳೆ.