ಮುಂಬೈ: 19 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ ಆಕೆಯ ತಾಯಿ ಕೂಡ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಥಾಣೆಯ ವಸಂತ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಶಾಕ್‍ನಲ್ಲಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ. ಆದ್ರೂ ಘಟನೆಗೆ ನಿರ್ದಿಷ್ಟ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಹಿಳೆ ಸಗುಣಾ ಕೊಡಮಂಚಿಲಿ(45) ಆಂಧ್ರಪ್ರದೇಶ ಮೂಲದವರಾಗಿದ್ದು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ತನ್ನ ಮಗಳು ನವ್ಯಾ ಜೊತೆಗೆ ವಾಸವಿದ್ದರು. ಕೆಲವು ದಿನಗಳ ಹಿಂದೆ ನವ್ಯಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಶನಿವಾರ ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಮೃತಪಟ್ಟಿದ್ದಳು.
ಮಗಳ ಸಾವಿನ ಸುದ್ದಿ ತಿಳಿದು ಸಗುಣಾ ಆಘಾತಕ್ಕೆ ಒಳಗಾಗಿದ್ದರು. ನವ್ಯಾಳ ಅಂತ್ಯಕ್ರಿಯೆಗಾಗಿ ಭಾನುವಾರದಂದು ಸಿದ್ಧತೆ ಮಾಡಿಕೊಳ್ಳಲಾಗ್ತಿತ್ತು. ಈ ಸಂದರ್ಭದಲ್ಲಿ ಭಾನುವಾರ ಬೆಳಗ್ಗೆ 5.30ರ ವೇಳೆಗೆ ಸಗುಣಾ ಮನೆಯಿಂದ ಹೊರಹೋಗಿ 17ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಟ್ಟಡದ ಇತರೆ ನಿವಾಸಿಗಳ ಪ್ರಕಾರ, ಮೃತ ಮಹಿಳೆಯ ಗಂಡ ಹಿಂದೆಯೇ ಓಡಿಬಂದರು. ಆದ್ರೆ ಅವರು ಹಿಡಿದುಕೊಳ್ಳುವ ವೇಳೆಗೆ ಮಹಿಳೆ ಕೆಳಗೆ ಜಿಗಿದಿದ್ದರು. ಇವರ ಮಗಳು ಇತ್ತೀಚೆಗಷ್ಟೇ ಪರೀಕ್ಷೆ ಬರೆದಿದ್ದಳು. ಆದರೆ ಈ ರೀತಿ ಯಾಕೆ ಮಾಡಿಕೊಂಡಳು ಎಂದು ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಚಿತಲ್ಸರ್ ಮನ್‍ಪಾದಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಮಗಳ ಸಾವಿಗೆ ಸಂಬಂಧಿಸಿದಂತೆ ವರ್ತಕ್ ನಗರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ನಾವು ಕೆಲವು ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಯುವತಿಯ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಮಹಿಳೆಗೆ ಈಕೆ ಒಬ್ಬಳೇ ಮಗಳಾಗಿದ್ದರಿಂದ ಆಕೆಯ ಸಾವಿನಿಂದ ಖಿನ್ನತೆಗೆ ಒಳಗಾಗಿರುವ ಶಂಕೆಯಿದೆ. ಇದೇ ಶಾಕ್‍ನಲ್ಲಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು. ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಚಿತಲ್ಸರ್ ಮನ್‍ಪಾದಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಗಣ್‍ಪತ್ ಪಿಂಗಾಲೇ ಹೇಳಿದ್ದಾರೆ.