ಬೆಂಗಳೂರು: ಇದೊಂದು ಕರುಣಾಜನಕ ಕಥೆ. ಕಿವಿ ಕೇಳದ ಹಾಗೂ ಮಾತು ಬಾರದ ಬುದ್ಧಿಮಾಂದ್ಯ ಮಗನಿಗಾಗಿ ತಾಯಿಯೊಬ್ಬರು ಬೀದಿ ಬೀದಿಯಲ್ಲಿ ಹುಡುಕಾಟ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುಮಾರಸ್ವಾಮಿ (19) ಕಾಣೆಯಾದ ಯುವಕ. ಇವರು ಮೂಲತಃ ಕೊಳ್ಳೇಗಾಲದವನಾಗಿದ್ದು, ಇವರಿಗೆ ಕಿವಿ ಕೇಳಿಸುತ್ತಿಲ್ಲ. ಮಾತು ಕೂಡ ಬರುತ್ತಿಲ್ಲ. ಹೀಗಾಗಿ ಇಂತಹವರಿಗಾಗಿಯೇ ಇರುವ ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಸಮರ್ಥನಂ ಟ್ರಸ್ಟ್ ನಲ್ಲಿ ಪೋಷಕರು ಸೇರಿಸಿದ್ದರು.
ಬೆಂಗಳೂರಿನಲ್ಲೇ ಮನೆ ಕೆಲಸ ಮಾಡಿಕೊಂಡು ಆಗಾಗ ಹೋಗಿ ಮಗನನ್ನು ನೋಡಿಕೊಂಡು ಬಂದು ಸ್ಬಲ್ಪ ನೆಮ್ಮದಿಯಿಂದಿದ್ದರು. ಆದರೆ ಕಳೆದ ಜನವರಿ 21ರಂದು ಟ್ರಸ್ಟ್ ನಿಂದ ಕುಮಾರಸ್ವಾಮಿ ಕಾಣೆಯಾಗಿದ್ದಾರೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ ಎನ್ನಲಾಗಿದೆ. ಇವರಿಗಾಗಿ ಟ್ರಸ್ಟ್ ನವರು ಒಂದೆರೆಡು ದಿನ ಹುಡುಕಾಡಿ ಸುಮ್ಮನಾಗಿದ್ದಾರೆ. ಆದರೆ ಹೆತ್ತ ಕರುಳಿಗೆ ನೆಮ್ಮದಿಯಿಲ್ಲದಂತಾಗಿದೆ.
ಯುವಕನ ತಾಯಿ ಮಗನಿಗಾಗಿ ಬೀದಿ ಬೀದಿಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ದಿನಗಳ ಹಿಂದೆ ಕೋಣನಕುಂಟೆಯ ಆವಲಹಳ್ಳಿ ಬಳಿ ಕಂಡಿದ್ದಾರೆ ಎಂದು ಹೇಳಲಾಗಿದೆ. ಜನ ಮಾತನಾಡಿಸಿದರು ಮಾತು ಬಾರದ ಯುವಕನನ್ನು ಕಳ್ಳನೆಂದು ಅನುಮಾನಿಸಿ ಹಿಗ್ಗಾ ಮುಗ್ಗ ಥಳಿಸಿದ್ದರಿಂದ ಅಲ್ಲಿಂದ ಭಯಗೊಂಡು ಯಾವುದೋ ಕಡೆ ಹೊರಟು ಹೋಗಿದ್ದಾನೆಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಬುದ್ಧಿಮಾಂದ್ಯ ಕುಮಾರಸ್ವಾಮಿಯು ಪ್ರತಿನಿತ್ಯವು ಔಷಧಿ ತೆಗೆದುಕೊಳ್ಳಬೇಕಿರುವುದರಿಂದ ಆದಷ್ಟು ಬೇಗನೆ ತನ್ನ ಮಗನನ್ನು ಹುಡುಕಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೆಚ್ ಆರ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.