– ಮುಗಿಲುಮುಟ್ಟಿದ ತಂದೆಯ ಆಕ್ರಂದನ
ಉಡುಪಿ: ಬೆಳಗಾವಿಯ ಅಥಣಿಯಲ್ಲಿ ಕೊಳವೆ ಬಾವಿಗೆ 6 ವರ್ಷದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಉಡುಪಿಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮಗುವನ್ನು ಕಲ್ಲು ಕ್ವಾರಿ ಬಲಿ ಪಡೆದಿದೆ.
Advertisement
ನಡೆದಿದ್ದೇನು?: ಉಡುಪಿಯ ಅಲೆವೂರಿನ ಪೆರುಪಾದೆ ಸರ್ಕಾರಿ ಸ್ವಾಮ್ಯದ ಕಲ್ಲಿನ ಕ್ವಾರಿ ಬಾಗಲಕೋಟೆ ಮೂಲದ ದ್ಯಾಮವ್ವ ಮತ್ತು ಹನುಮಂತ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ಒಗೆಯಲು ಹೋದ ದ್ಯಾಮವ್ವ ನಾಲ್ಕು ವರ್ಷದ ಮಗನನ್ನು ಬಂಡೆಯ ಮೇಲೆ ಆಟವಾಡಲು ಬಿಟ್ಟಿದ್ದರು. ಹನುಮಂತ ಆಟವಾಡುತ್ತಾ ಕಲ್ಲಿನ ಕ್ವಾರಿಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದ ತಕ್ಷಣ ರಕ್ಷಿಸಲು ಹೋದ ತಾಯಿ ಕೂಡಾ ಮುಳುಗಿದ್ದಾರೆ. ತಾಯಿ-ಮಗು ಮುಳುಗುವುದನ್ನು ಕಂಡು ರಕ್ಷಿಸಲು ಸ್ಥಳೀಯರು ಹೋಗುವಷ್ಟರಲ್ಲಿ ಸಂಪೂರ್ಣ ಮುಳುಗಿ ಮೃತಪಟ್ಟಿದ್ದಾರೆ.
Advertisement
Advertisement
ಘಟನೆ ನಡೆದು ಸುಮಾರು 1 ಗಂಟೆ ಬಿಟ್ಟು ಅಗ್ನಿಶಾಮಕ ದಳ ಬೋಟ್ ಜೊತೆ ಬಂತು. ಆ ತಂಡದಲ್ಲಿ ಮುಳುಗು ತಜ್ಞರೇ ಇರಲಿಲ್ಲ. ಗರುಡಪಾತಾಳ ಹಾಕಿ ಮೃತದೇಹ ಹುಡುಕಲು ಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಅಧಿಕಾರಿಗಳ ಅಸಹಾಯಕತೆ ಕಂಡು ಸ್ಥಳೀಯ ಮುಳುಗು ತಜ್ಞರನ್ನು ಕರೆಸಲಾಯ್ತು. ಮೂವರು ಮುಳುಗು ತಜ್ಞರು ಬಂದು ಸುಮಾರು 15 ನಿಮಿಷಗಳ ಕಾಲ ಹುಡುಕಾಟ ನಡೆಸಿದರು. ಕ್ವಾರಿಯಲ್ಲಿ ಪಾಚಿ ತುಂಬಿಕೊಂಡಿದೆ. ಹಳೆಯ ಬಟ್ಟೆಗಳ ರಾಶಿಯೇ ಇದೆ. ಆಳದಲ್ಲಿ ಎರಡು ಮೃತದೇಹಗಳು ಸಿಲುಕಿದ್ದು, ಸದ್ಯ ಮೃತದೇಹಗಳನ್ನ ಮೇಲಕ್ಕೆತ್ತಿದ್ದೇವೆ ಅಂತಾ ಮುಳುಗು ತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.
Advertisement
ಅಗ್ನಿಶಾಮಕದಳದ ಅಸಹಾಯಕತೆಗೆ ಸ್ಥಳೀಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಂಡದಲ್ಲಿ 10-15 ಮಂದಿ ಇದ್ದರು. ಅದರಲ್ಲಿ ಒಬ್ಬನೂ ಈಜುಗಾರ ಇರಲಿಲ್ಲ ಎಂಬುದು ವಿಪರ್ಯಾಸ. ಇವರು ದೋಣಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಎಸೆದು ಹುಡುಕಾಟ ಮಾಡಿದರು. ಒಬ್ಬ ಸಿಬ್ಬಂದಿಯೂ ನೀರಿಗೆ ಇಳಿಯಲಿಲ್ಲ. ಈಜಲು- ಮುಳುಗಲು ಬಾರದವರನ್ನು ಅಗ್ನಿಶಾಮಕ ಇಲಾಖೆಗೆ ಆಯ್ಕೆ ಮಾಡಿದ್ದು ಯಾಕೆ?, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಪರಿಣತರನ್ನು ಇಲಾಖೆಗೆ ಸೇರಿಸಬೇಕು ಎಂದು ಸ್ಥಳೀಯ ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸೇರಿಗಾರ್ ಆಕ್ರೋಶ ವ್ಯಕ್ತಪಡಿಸಿದರು.
ಮುಗಿಲುಮುಟ್ಟಿದ ಆಕ್ರಂದನ: ದ್ಯಾಮವ್ವನ ಗಂಡ ಯಮುನಪ್ಪ ಹಾಸಂಗಿಗೆ ಮಾತು ಬರಲ್ಲ. ಕಿವಿನೂ ಕೇಳಿಸಲ್ಲ. ಮೃತದೇಹಗಳ ಪಕ್ಕ ಯಮುನಪ್ಪ ಕುಳಿತು ರೋಧಿಸುತ್ತಿದ್ದುದ್ದು ನೆರೆದವರ ಮನ ಕಲಕುವಂತಿತ್ತು. ಕಳೆದ ಮೂವತ್ತು ವರ್ಷಗಳಿಂದ ಇಬ್ಬರ ಕುಟುಂಬ ಉಡುಪಿಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿತ್ತು. ಇಬ್ಬರಿಗೂ ಇಲ್ಲೇ ಮದುವೆಯಾಗಿತ್ತು. ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಜಿಲ್ಲೆಯಾದ್ಯಂತ ಸರ್ಕಾರ ನೂರಾರು ಬಂಡೆ ಕಲ್ಲು ಕ್ವಾರಿಗಳಿಗೆ ಪರವಾನಿಗೆ ನೀಡಿದೆ. ಕಲ್ಲು ತೆಗೆದು ಖಾಲಿಯಾದಾಗ ಕ್ವಾರಿಯನ್ನು ಹಾಗೆಯೇ ಬಿಟ್ಟು ಹೋಗಲಾಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕಾ ಬೋರ್ಟ್ ಅಳವಡಿಸಿಲ್ಲ. ಜಿಲ್ಲೆಯಾದ್ಯಂತ ನೂರಾರು ಕಲ್ಲುಕ್ವಾರಿಗಳಿದ್ದು ಎಲ್ಲವೂ ಹೀಗೆಯೇ ತೆರೆದುಕೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜವಾಬ್ದಾರಿ ಇದು. ನಿದ್ದೆ ಮಾಡುತ್ತಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.