ತುಮಕೂರು: ಸಾಕು ತಾಯಿಯಿಂದ ಅಮಾನವೀಯವಾಗಿ ದೈಹಿಕ ಹಿಂಸೆಗೊಳಗಾಗಿ ನರಕಯಾತನೆ ಅನುಭವಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕುಣಿಗಲ್ ತಾಲೂಕಿನ ಸಿಡಿಪಿಒ ಅನುಷಾ ಅವರು ರಕ್ಷಣೆ ಮಾಡಿ ಬಾಲಕಿಯರ ಬಾಲ ಭವನದ ವಶಕ್ಕೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
6ನೇ ತರಗತಿ ಓದುತ್ತಿರುವ ಬಾಲಕಿ ತನ್ನ ಸಾಕು ತಾಯಿಯ ಶೋಷಣೆಗೆ ಒಳಗಾಗಿದ್ದಾಳೆ. ಎರಡೂವರೆ ವರ್ಷವಿದ್ದಾಗ ಬಾಲಕಿಯ ಪೋಷಕರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಬಸ್ ನಿಲ್ದಾಣದಲ್ಲೇ ಬೊಂಡ ಬಜ್ಜಿ ಹಾಕುವ ರತ್ನಮ್ಮ ಅನಾಥ ಮಗುವನ್ನು ತಂದು ಸಾಕಿಕೊಂಡಿದ್ದರು.
ರತ್ನಮ್ಮನ ಪತಿ 4 ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಮೃತಪಟ್ಟಿದ್ದರು. ಪತಿ ಮೃತಪಟ್ಟ ನಂತರ ರತ್ನಮ್ಮ ಬಾಲಕಿಗೆ ಪ್ರತಿದಿನ ಚಿತ್ರ ಹಿಂಸೆ ಕೊಡಲು ಆರಂಭಿಸಿದ್ದಳು. ಬೊಂಡ ಬಜ್ಜಿಗೆ ಸಿದ್ಧತೆ ಮಾಡಿಕೊಳ್ಳಲು ಬಾಲಕಿಯನ್ನು ಬಳಕೆ ಮಾಡಿಕೊಂಡು ದುಡಿಸಿಕೊಳ್ಳತ್ತಾಳೆ. ಜೊತೆಗೆ ಕೆಲಸ ಮಾಡುವಂತೆ ಹಲ್ಲೆ ಮಾಡುವ ಮೂಲಕ ಹಿಂಸೆ ನೀಡುತ್ತಿದ್ದಳು.
ಜ. 17ರಂದು ರತ್ನಮ್ಮ ಬಾಲಕಿಯ ಎರಡು ತೊಡೆಗಳಿಗೆ ಕಾದ ಕಬ್ಬಿಣದ ಜಾಲರಿಯಿಂದ ಅಮಾನವೀಯವಾಗಿ ಸುಟ್ಟಿದ್ದಳು. ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಕೊಡಿಸುವ ಗೋಜಿಗೂ ರತ್ನಮ್ಮ ಮುಂದಾಗುವುದಿಲ್ಲ. ಶಾಲೆಯಲ್ಲಿ ಸಹ ಪಾಠಿಗಳು ನೀಡಿದ ಮಾಹಿತಿ ಮೆರೆಗೆ ಮುಖ್ಯ ಶಿಕ್ಷಕ ರಾಜಣ್ಣ ವಿದ್ಯಾರ್ಥಿನಿಯನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಅದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿದ್ದರು.
ಈ ವಿಚಾರವನ್ನು ಆಶಾ ಕಾರ್ಯಕರ್ತೆಯ ಮೂಲಕ ಸಿಡಿಪಿಒ ಅನುಷಾ ಅವರು ತಿಳಿದುಕೊಂಡು ಗುರುವಾರ ಬಾಲಕಿಯನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ತುಮಕೂರಿನ ಬಾಲಕಿಯರ ಬಾಲಭವನದ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣಿಯಲ್ಲಿ ಸಾಕು ತಾಯಿ ರತ್ನಮ್ಮ ಹಾಗೂ ಆಕೆಯ ಮಗ ಸಾಗರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.