ಬೆಂಗಳೂರು: 7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 4ರಂದು ಜ್ಯೋತಿ ತನ್ನ 7 ವರ್ಷದ ಮಗಳನ್ನು ಕೊಲೆ ಮಾಡಿ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಡೆಲ್ ಆಗಿರುವ ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಳು.
ವಿಡಿಯೋದಲ್ಲಿ ಜ್ಯೋತಿ, ತನ್ನ ಗಂಡ ನನ್ನ ಮೇಲೆ ಕೀಳಾಗಿ ಸಂಶಯಿಸುತ್ತಾನೆ. ಅಲ್ಲದೆ ತನ್ನ ಶೀಲದ ಬಗ್ಗೆ ಸಂಶಯ ಮಾಡಿ ಜಗಳವಾಡುತ್ತಾನೆ. ಇದೇ ವಿಚಾರಕ್ಕೆ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಳು.
ಈ ವಿಡಿಯೋ ನೋಡಿದ ಜ್ಯೋತಿ ಸಹೋದರ ಪ್ರಶಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಜ್ಯೋತಿಯ ಪತಿ ಪಂಕಜ್ ವಿರುದ್ಧ ದೂರು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಿದು ಘಟನೆ?
ಜ್ಯೋತಿ ಭಾನುವಾರ ತನ್ನ ಮಗಳನ್ನು ಕೊಲೆ ಮಾಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಜ್ಯೋತಿ ಕಳೆದ 10 ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಳು.