ಧಾರವಾಡ: ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಮಗ ಅನುತ್ತೀರ್ಣನಾದ ಕಾರಣ ತಾಯಿ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ರಂಪಾಟ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ರಾಹುಲ್ ಕುಲಕರ್ಣಿ ಎಂಬ ವಿದ್ಯಾರ್ಥಿಯ ತಾಯಿ ರಮಾ ಕುಲಕರ್ಣಿಯೇ ರಂಪಾಟ ಮಾಡಿದವರು. ಧಾರವಾಡ ಕೆಸಿಡಿ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್ ಎರಡು ವಿಷಯದಲ್ಲಿ ಫೇಲಾಗಿದ್ದಾನೆ.
ಇದನ್ನೇ ನೆಪ ಇಟ್ಟುಕೊಂಡು ರಾಹುಲ್ ತಾಯಿ ರಮಾ ಕುಲಕರ್ಣಿ ಅವರು ಗುರುವಾರ ಕೆಸಿಡಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಪ್ರಾಂಶುಪಾಲರಿಗೆ ಬೈದಿದ್ದಾರೆ. ಇನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಕೂಡಾ ಅಪಮಾನ ಮಾಡಿರುವ ರಮಾ ಕುಲಕರ್ಣಿ ತನ್ನ ಮಗನನ್ನ ಪಾಸ್ ಮಾಡುವಂತೆ ಬೇಡಿಕೆಯಿಟ್ಟು ರದ್ದಾಂತ ಮಾಡಿದ್ದಾರೆ.
ಘಟನೆ ಸಂಬಂಧ ರಮಾ ಕುಲಕರ್ಣಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುವ ಕರ್ನಾಟಕ ವಿವಿ ಅಧಿಕಾರಿ ಮಂಡಳಿ, ಅವರ ಮೇಲೆ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಸದ್ಯ ಪೊಲೀಸರು ರಮಾ ಅವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.
ಇನ್ನು ಈ ರಮಾ ಕುಲಕರ್ಣಿ ಚುನಾವಣೆಯಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕೂಡಾ ಆಗಿದ್ದಾರೆ ಎನ್ನಲಾಗಿದೆ.