ಬೆಂಗಳೂರು: ತಾಯಿಯೊಬ್ಬರು ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ನಂತರ ತಾನೂ ಸೀಮೆ ಎಣ್ಣೆ ಸುರಿದುಕೊಂಡು ಮಕ್ಕಳನ್ನು ತಬ್ಬಿಕೊಂಡು ಮೂವರು ಸಜೀವವಾಗಿ ದಹನವಾಗಿರುವ ಘಟನೆ ನಗರದ ಮಾರತ್‍ಹಳ್ಳಿ ಸಮೀಪದ ಸಂಜಯ್‍ನಗರ ಬಳಿ ನಡೆದಿದೆ.
ಜಸ್ವಂತ್ (4) ಮತ್ತು ಮಗಳು ಹಾಸಿನಿ(2) ತಾಯಿಯಿಂದಲೇ ಸಜೀವ ದಹನವಾದ ದುರ್ದೈವಿಗಳು. ಗುರುವಾರ ಬೆಳಗ್ಗೆ 8.30ರ ವೇಳೆಗೆ ರಾಮಲಮ್ಮ ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮಿಳುನಾಡು ಮೂಲದ ಕುಟುಂಬದವರಾಗಿದ್ದು, ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ತಾಯಿ ರಾಮಲಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಪತಿ ಇಂದು ಬೆಳಿಗ್ಗೆ ಪತ್ನಿ ರಾಮಲಮ್ಮಗೆ ಹಣ ಕೊಟ್ಟು ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಪತಿ ಹೋದ ತಕ್ಷಣ ಮನೆಯೊಳಗೆ ಮೊದಲು ಇಬ್ಬರು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ತಾನೂ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮಕ್ಕಳನ್ನು ತಪ್ಪಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ನೆರೆಹೊರೆಯವರು ಬಂದು ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಕೊನೆಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಎಚ್‍ಎಎಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.