ಕೋಲಾರ: ಕಾನ್ವೆಂಟ್ ಶಾಲೆಗೆ ಮಕ್ಕಳನ್ನ ಸೇರಿಸಿಲ್ಲ ಅನ್ನೋ ಕಾರಣಕ್ಕೆ ಗಂಡನ ಮೇಲಿನ ಕೋಪಕ್ಕೆ ತಾಯಿಯೊಬ್ಬಳು ತನ್ನ ಮೂರು ಮಕ್ಕಳನ್ನು ಕೆರೆಗೆ ದೂಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ(25) ತನ್ನ ಮೂವರು ಮಕ್ಕಳಾದ ಜೀವನ್(7), ಚಂದನ(5) ಹಾಗೂ ಅಕ್ಷಯ್(3) ಗುರುವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗಂಡನ ಮೇಲಿನ ಸಿಟ್ಟಿಗೆ ರೊಚ್ಚಿಗೆದ್ದು ಪಾರ್ವತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
Advertisement
ಘಟನೆಯ ವಿವರ:
ನಕ್ಕಲಹಳ್ಳಿ ಮಂಜುನಾಥನಿಗೆ ಪಕ್ಕದ ಯಲುವಳ್ಳಿಯಲ್ಲಿನ ಅಕ್ಕನ ಮಗಳು ಪಾರ್ವತಿಯನ್ನ ಎಂಟು ವರ್ಷದ ಹಿಂದೆಯೇ ಮದುವೆ ಮಾಡಿಕೊಡಲಾಗಿತ್ತು. ಪತಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮೊದಲನೇ ಮಗ ಜೀವನ್ ನನ್ನ ಊರ ಪಕ್ಕದಲ್ಲಿದ್ದ ಖಾಸಗಿ ಸ್ಕೂಲ್ ಗೆ ಸೇರಿಸಿದ್ದರು. ಈ ವರ್ಷ ಎರಡನೇ ಮಗ ಚಂದನ್ ನನ್ನು ಶಾಲೆಗೆ ಸೇರಿಸುವ ವಿಷಯದಲ್ಲಿ ದಂಪತಿ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು.
Advertisement
ಪತಿ ಮಂಜುನಾಥ್ ಪ್ರತಿಕ್ರಿಯಿಸಿ, ಕೂಲಿಯನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದರಿಂದ ಮತ್ತೊಬ್ಬ ಮಗನನ್ನು ಕಾನ್ವೆಂಟ್ ಗೆ ಸೇರಿಸುವುದು ಕಷ್ಟವಾಗಿತ್ತು. ಮೂರನೇ ಮಗ ಅಕ್ಷಯನನ್ನೂ ಬರೋ ವರ್ಷ ಶಾಲೆಗೆ ಸೇರಿಸಬೇಕಾಗಿತ್ತು. ಹಾಗಾಗಿ ಈ ಜಂಜಾಟವೇ ಬೇಡ ಎಂದು ಮೂರು ಮಕ್ಕಳೂ ಸರ್ಕಾರಿ ಶಾಲೆಯಲ್ಲಿಯೇ ಓದಲಿ ಅನ್ನೋದು ನನ್ನ ಆಶಯವಾಗಿತ್ತು. ಆದರೆ ಪತ್ನಿ ಪಾರ್ವತಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
Advertisement
ಸಣ್ಣ ಊರಲ್ಲಿ ಕೆಲ ಅನುಕೂಲವಂತ ಮಕ್ಕಳು ಕಾನ್ವೆಂಟ್ ಗೆ ಹೋಗುವಂತೆ ತಮ್ಮ ಮಕ್ಕಳು ಕಾನ್ವೆಂಟ್ ಗೆ ಹೋಗಬೇಕೆಂದು ಪಾರ್ವತಿ ಆಸೆ ಪಟ್ಟಿದ್ದಳು. ಜೂನ್ 14ರ ಗುರುವಾರ ಪತಿಯ ಬಳಿ ಈ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮಂಜುನಾಥ್ ಕೆಲಸಕ್ಕೆ ಹೋದ ಬಳಿಕ ಮೂರು ಮಕ್ಕಳೊಂದಿಗೆ ಕೆರೆಗೆ ಹಾರಿದ್ದಾಳೆ. ಗುರುವಾರ ಸಂಜೆ ಪಾರ್ವತಿ ಮತ್ತು ಕೊನೆಯ ಮಗ ಅಕ್ಷಯ್ ಮೃತದೇಹಗಳು ಕೆರೆಯಲ್ಲಿ ತೇಲುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.
Advertisement
ಉಳಿದ ಇಬ್ಬರು ಮಕ್ಕಳಿ ಶವಕ್ಕಾಗಿ ಊರಲ್ಲಿ ಮತ್ತು ನೆರೆಯ ಊರುಗಳಲ್ಲಿ ಹುಡುಕಿದ್ದರೂ ಮೃತದೇಹ ಪತ್ತೆ ಆಗಿರಲಿಲ್ಲ. ಇಬ್ಬರು ಮಕ್ಕಳನ್ನೂ ಕೆರೆಗೆ ತಳ್ಳಿರಬಹುದಾ ಅನ್ನೋ ಅನುಮಾನವಿತ್ತು. ಆದರೂ ಕೆರೆಗೆ ಇಳಿಯುವ ಕೆಲಸಕ್ಕೆ ಯಾರೂ ಮುಂದಾಗಿರಲಿಲ್ಲ. ಶುಕ್ರವಾರ ಬೆಳಕಾಗುತ್ತಿದ್ದಂತೆ ಕೆರೆಯಲ್ಲಿ ಜೀವನ್ ಮತ್ತು ಚಂದನ್ ಮೃತದೇಹಗಳು ಮೇಲೆದ್ದಿವೆ. ಹಿಂದಿನ ದಿನವಷ್ಟೆ ತಾಯಿ, ಮಗುವಿನ ಮೃತದೇಹವನ್ನ ಕಂಡಿದ್ದ ಗ್ರಾಮಸ್ಥರಿಗೆ ಮತ್ತೆರಡು ಮುಗ್ದ ಮಕ್ಕಳ ಮೃತದೇಹಗಳನ್ನ ನೋಡಿ ಕಣ್ಣೀರಿಟ್ಟರು ಎಂದು ಮೃತ ಪಾರ್ವತಿಯ ಸಹೋದರ ನಾಗರಾಜ ಹೇಳಿದ್ದಾರೆ. ಈ ಕುರಿತು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.