ಮಡಿಕೇರಿ: ಆಕೆ ತನ್ನ ತವರು ಮನೆಗೆ ಹೆರಿಗೆಗೆಂದು ಬಂದಿದ್ದಳು. 8 ದಿನದ ಹಿಂದೆಯಷ್ಟೇ ಸುಂದರ ಹೆಣ್ಣು ಮಗುವೊಂದು ಜನಿಸಿತ್ತು. ಆದ್ರೆ ಅದೇನಾಗಿತ್ತೋ ಏನೋ ಮನೆಯವರು ಹೊರಗೆ ಕೆಲಸ ಮಾಡುವಾಗ ಇತ್ತ ಎರಡು ಪುಟ್ಟ ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆಗೆ ತಾಯಿ ಶರಣಾಗಿದ್ದಾಳೆ. ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ (Bettadapura) ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಕಟುಕನಿಗೂ ಕರುಳು ಹಿಂಡುವಂತಿದೆ.
ಘಟನೆ ಕಂಡು ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಮತ್ತೊಂದು ಕಡೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಟ್ಟದಪುರ ಮುಸ್ಲಿಂ ಬ್ಲಾಕ್ ನಿವಾಸಿ ರಬಿಯಾ ಭಾನು (21) ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತಳಿಗೆ 2 ವರ್ಷದ ಅನಮ್ ಫಾತಿಮಾ ಎಂಬ ಹೆಣ್ಣುಮಗಳಿದ್ದಳು. ಮತ್ತೊಂದು ಮಗು 8 ದಿನಗಳ ಹಿಂದಷ್ಟೇ ಜನಿಸಿತ್ತು. ತವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಕ್ಕಳ ಕತ್ತು ಕೊಯ್ದು ಕೃತ್ಯ ಎಸಗಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದಿದ್ರೂ ಕರಾಳ ದಿನಾಚಣೆ – ಗಡಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ
ಪೊಲೀಸ್ ಮೂಲಗಳ ಪ್ರಕಾರ, ರಬಿಯಾ ಭಾನು ಅವರ ಮೊದಲ ಮಗಳು 2 ವರ್ಷದವಳಿದ್ದು, ಅಂಗವಿಕಲೆಯಾಗಿದ್ದಳು. ಕುಟುಂಬದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಆಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ, ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಶಂಕೆಯಿದೆ. ಆದ್ರೆ ಇದು ಕೇವಲ ಊಹೆ. ಆಕೆ ಎಂದಿನಂತೆ ಮನೆಯಲ್ಲಿ ಲವಲವಿಕೆಯಿಂದಲೇ ಇದ್ದಳು. ತಂದೆ ಹಾಗೂ ಸಹೋದರ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಕ್ಕಳನ್ನ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಘಟನೆಯಿಂದ ರಬಿಯಾ ಭಾನು ಪತಿ ಕೂಡ ಶಾಕ್‌ಗೆ ಒಳಗಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಬಳಿಕ ಬೆಟ್ಟದಪುರ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಸ್ಥಳೀಯರು ಹೇಳುವಂತೆ, ರಬಿಯಾ ಭಾನು ಕೆಲ ತಿಂಗಳಿಂದ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗ್ತಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ; ಹೊಸ ದರ ಇಂದಿನಿಂದಲೇ ಜಾರಿ


