ವಿಜಯಪುರ: ಆಗಸ್ಟ್ ನಲ್ಲಿ ಮಾರಾಟ ಮಾಡಲಾಗಿದ್ದ ಮಗು ಪತ್ತೆಯಾಗಿದೆ. 2 ತಿಂಗಳ ಕಂದಮ್ಮನನ್ನು ತಾಯಿಯೇ 6 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂಬ ಭಯಾನಕ ಸತ್ಯ ಪ್ರಾಥಮಿಕ ತನಿಖೆ ವೇಳೆ ಹೊರ ಬಿದ್ದಿದೆ.
ಕಳೆದ ಆಗಸ್ಟ್ 26ರಂದು ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನವಜಾತ ಶೀಶುವಿನ ಮಾರಾಟವಾಗಿತ್ತು. ಇದರ ಹಿನ್ನೆಲೆ ಮಗುವಿನ ತಾಯಿಯ ಹೇಳಿಕೆಯ ಮೇಲೆ ಜಿಲ್ಲಾಸ್ಪತ್ರೆಯ ನರ್ಸ್ ಕಸ್ತೂರಿ ಹಾಗೂ ಪತಿ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಮಗು ಮಾತ್ರ ಪತ್ತೆ ಆಗಿರಲಿಲ್ಲ. ಸದ್ಯ ಮಗು ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೊರಕಿದೆ. ಇನ್ನು ಮಗುವಿನ ಮಾರಾಟವನ್ನ ನರ್ಸ್ ಕಸ್ತೂರಿ ಹಾಗೂ ಪತಿ ಮಂಜುನಾಥ ಮಾಡಿಲ್ಲ ಅನ್ನೋದು ಮೇಲ್ನೋಟಕ್ಕೆ ಧೃಢಪಟ್ಟಿದೆ. ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?
ಮಗುವನ್ನ ತಾಯಿ ದೇವರಹಿಪ್ಪರಗಿ ಪಟ್ಟಣದ ಓರ್ವ ಅಟೋ ಚಾಲಕನಿಗೆ 6000 ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆಟೋ ಚಾಲಕ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಓರ್ವರಿಗೆ ಮಾರಾಟ ಮಾಡಿದ್ದಾನೆ ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಮಗುವಿಗೆ ಅನಾರೋಗ್ಯವಾದ ಕಾರಣ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಮಗು ಮಾರಾಟಕ್ಕೆ ತೆಗೆದುಕೊಂಡಿದ್ದವರು ಕಿಮ್ಸ್ ನಲ್ಲಿ ಮಗುವನ್ನು ದಾಖಲು ಮಾಡಿದ್ದರು. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಖರಿಸಿದ್ದರು ಎನ್ನಲಾಗಿದೆ.
ತನಿಖೆ ಮುಂದುವರೆದಿದ್ದು, ಸಂಪೂರ್ಣ ತನಿಖೆಯ ನಂತರ ಪ್ರಕರಣದ ಹಿಂದಿರುವವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ತಾಯಿಯೇ ಮಗುವನ್ನು ಮಾರಾಟ ಮಾಡಿರುವ ವಿಷಯ ತಿಳಿದು ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.