– ಪತಿ ಕೆಲ್ಸಕ್ಕೆ ಹೋಗ್ತಿದ್ದಂತೆ ಪ್ರಿಯಕರ ಮನೆಗೆ ಬರ್ತಿದ್ದ
– ಅಜ್ಜಿ ಮನೆಯಲ್ಲಿ ಮಗು ಬಿಟ್ಟು ಲವ್ವರ್ ಜೊತೆ ಎಸ್ಕೇಪ್
ಬಳ್ಳಾರಿ: ತನಗೆ ಬೇಡವಾದ ಗಂಡನಿಗೆ ಹುಟ್ಟಿದ ಮಗು ಎನ್ನುವ ಕಾರಣಕ್ಕಾಗಿ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗಳಿಗೆ ಮೈತುಂಬಾ ಬರೆ ಎಳೆದ ಅಮಾನುಷ ಘಟನೆ ಜಿಲ್ಲೆಯ ಸಿರಗುಪ್ಪ ನಗರದಲ್ಲಿ ನಡೆದಿದೆ.
ಸಿರಗುಪ್ಪ ನಗರದ ನಿವಾಸಿ ನರಸಪ್ಪಾ ಮತ್ತು ವಾಣಿಗೆ 6 ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಬ್ಬರಿಗೂ ನಾಲ್ಕು ವರ್ಷದ ಮಗು ಇದೆ. ಆದರೆ ಪತ್ನಿ ವಾಣಿ ಕಳೆದ ಕೆಲವು ವರ್ಷಗಳಿಂದ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಇತ್ತ ಪತಿ ದುಡಿಯಲೆಂದು ಮಂಗಳೂರಿಗೆ ಹೋಗಿದ್ದಾಗ ಪ್ರಿಯಕರ ಮಲ್ಲಿಕಾರ್ಜುನ ಸಿರಗುಪ್ಪದ ವಾಣಿ ಮನೆಯಲ್ಲಿಯೇ ಇರುತ್ತಿದ್ದನು. ಆದರೆ ಇವರಿಗೆ ನಾಲ್ಕು ವರ್ಷದ ಮಗಳು ಮುಳುವಾಗಿತ್ತು. ಹೀಗಾಗಿ ತಾಯಿ ವಾಣಿ ತನ್ನ ಹೆತ್ತ ಮಗಳಿಗೆ ಶುಕ್ರವಾರ ರಾತ್ರಿ ಮೈತುಂಬಾ ಬರೆ ಎಳೆದಿದ್ದಾಳೆ. ಮಗುವಿನ ಕಿರುಚಾಟ ಕೇಳಿದ ಸ್ಥಳೀಯರು ಮನೆಗೆ ಬಂದು ಮಹಿಳೆಗೆ ಹಿಗ್ಗಾಮುಗ್ಗಾ ತಳಿಸಿ ಮಗುವನ್ನು ರಕ್ಷಣೆ ಮಾಡಿದ್ದರು.
ಇಂದು ವಾಣಿ ತನ್ನ ಮಗಳನ್ನು ಅಜ್ಜಿಯ ಬಳಿ ಬಿಟ್ಟು ಪ್ರಿಯಕರ ಮಲ್ಲಿಕಾರ್ಜುನ ಜೊತೆ ಓಡಿಹೋಗಿದ್ದಾಳೆ. ಇತ್ತ ವಿಷಯ ತಿಳಿದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ತಾಯಿ ವಾಣಿ ಮತ್ತು ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.