ಬಾಗಲಕೋಟೆ: ಎದೆ ಮೇಲೆ ಕಲ್ಲು ಎತ್ತಿ ಹಾಕಿ, ಕತ್ತು ಹಾಗೂ ಮರ್ಮಾಂಗ ಹಿಸುಕಿ ದತ್ತು ಮಗನ್ನೇ ಪಾಪಿ ತಾಯಿಯೊಬ್ಬಳು ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ದತ್ತು ಮಗನನ್ನು ವಸಂತ ಮಾಲಿಂಗಪ್ಪ ಕುರಬಳ್ಳಿ(24) ಎಂದು ಗುರುತಿಸಲಾಗಿದೆ. ಮೊದಲು ತಾಯಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು.
ಮಗ ಶವವಾಗಿ ಚೀಲದಲ್ಲಿ ಪತ್ತೆಯಾಗಿದ್ದ. ಕೂಡಲೇ ಪೊಲೀಸರು ತಾಯಿಯನ್ನು ವಿಚಾರಣೆ ನಡೆಸಿದರು. ಆಗ ಆಕೆ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ದತ್ತುಮಗನನ್ನೇ ಕೊಲೆ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಅಳಿಯಂದಿರು ಹಾಗೂ ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿಸಿದ್ದಾಳೆ. ಇದನ್ನೂ ಓದಿ: ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?
ಜೂನ್ 19 ರಂದು ಮುಂಜಾನೆ 4 ಗಂಟೆಗೆ ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣ ಹಾಗೂ ಪ್ರಿಯಕರ ನಿಂಗಪ್ಪ ಸೇರಿ ವಸಂತನನ್ನು ಕೊಲೆ ಮಾಡಿದ್ದಾರೆ. ಎದೆ ಮೇಲೆ ಕಲ್ಲು ಎತ್ತಿ ಹಾಕಿ ನಂತರ ಕತ್ತು ಹಾಗೂ ಮರ್ಮಾಂಗವನ್ನು ಹಿಸುಕುವ ಮೂಲಕ ಬರ್ಬರವಗಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಚೀಲದಲ್ಲಿ ತುಂಬಿದ್ದಾರೆ. ಹೀಗೆ ಶವ ತುಂಬಿದ ಚೀಲವನ್ನು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಾಳ ಸೀಮೆಯ ಕಾಲುವೆಯಲ್ಲಿ ಬಿಸಾಕಿದ್ದರು.
ಇತ್ತ ಜುಲೈ 6 ರಂದು ತಾಯಿ ಕಮಲವ್ವ, ಮಗ ನಾಪತ್ತೆ ಅಂತ ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಪೊಲೀಸ್ ತನಿಖೆ ವೇಳೆ ತಾಯಿ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ವಯಸ್ಸಲ್ಲದ ವಯಸ್ಸಲ್ಲಿ ಕಮಲವ್ವಳ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಮಗಳ ಮಾವನ(ಮಗಳ ಗಂಡನ ತಂದೆ) ನಿಂಗಪ್ಪ ಜೊತೆಗೆ ಕಮಲವ್ವ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸದ್ಯ ಆರೋಪಿಗಳನ್ನು ಲೋಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.