ಬೆಂಗಳೂರು: ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ತಾಯಿ, ಮಗ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ನಂದಗುಡಿ ಸಮೀಪದಲ್ಲಿ ನಡೆದಿದೆ.
ಈ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಂಗಾಧರ್ ಬೈಕಿನಲ್ಲಿ ತಾಯಿಯೊಂದಿಗೆ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದರು. ಆದರೆ ನಂದಗುಡಿ ಸಮೀಪ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ನಡುರಸ್ತೆಯಲ್ಲೇ ತಾಯಿ ಮಗ ಬಿದ್ದಿದ್ದಾರೆ.
ರಸ್ತೆಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ತಾಯಿ ಮಗನನ್ನು ರಕ್ಷಿಸದೇ ಸಾರ್ವಜನಿಕರು ಮೊಬೈಲ್‍ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದರು. ನಂತರ ಸ್ಥಳದಲ್ಲಿದ್ದವರು ಅಂಬುಲೆನ್ಸ್ ಗೆ ಫೋನ್ ಮಾಡಿ ಅವರಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಗಾಧರ್ ಮೊಬೈಲ್ ಅಂಗಡಿ ಮ್ಯಾನೇಜರ್ ಹಾಗೂ ಮೊಬೈಲ್ ಕಂಪನಿ ವಿರುದ್ಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.