ಬಾಗಲಕೋಟೆ: ಟ್ರ್ಯಾಕ್ಟರ್ ಪಲ್ಟಿಯಾಗಿ ತಾಯಿ- ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದಲ್ಲಿ ನಡೆದಿದೆ.
ತಾಯಿ ಸವಿತಾ ತೇಲಿ(40) ಹಾಗೂ 6 ವರ್ಷದ ಮಗ ಪ್ರವೀಣ ಮೃತ ದುರ್ದೈವಿಗಳು. ಮೃತರು ರನ್ನಬೆಳಗಲಿ ಗ್ರಾಮದ ಅಂಗಡಿಯಿಂದ ತಮ್ಮ ಮನೆಗೆ ಹೊರಡುವ ವೇಳೆ ಕಬ್ಬು ತುಂಬಿದ ಡಬಲ್ ಟ್ರೇಲರ್ ಟ್ರ್ಯಾಕ್ಟರ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.
ಟ್ರ್ಯಾಕ್ಟರ್ ಚಾಲಕನ ನಿಷ್ಕಾಳಜಿಯಿಂದಲೇ ಈ ದುರಂತ ಸಂಭವಿಸಿದ್ದು, ಈ ವೇಳೆ ಟ್ರ್ಯಾಕ್ಟರ್ ಅಡಿಯಲ್ಲಿ ಸುಮಾರು ಆರು ಜನ ಸಿಲುಕಿದ್ದರು. ಟ್ರ್ಯಾಕ್ಟರ್ ಪಲ್ಟಿಯಾದ ಕೂಡಲೇ ಸಮಯ ಪ್ರಜ್ಞೆ ಮೆರೆದ ಗ್ರಾಮಸ್ಥರು, ಘಟನಾ ಸ್ಥಳಕ್ಕೆ ಎರಡು ಜೆಸಿಬಿ ತರಿಸಿ, ರಸ್ತೆಯ ಮೇಲೆ ಬಿದ್ದಿದ್ದ ಕಬ್ಬನ್ನ ತೆಗೆಯುವ ಕಾರ್ಯಾಚಾರಣೆ ಮಾಡಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಬಾಲಕರು, ಓರ್ವ ಬಾಲಕಿ, ಓರ್ವ ಮಹಿಳೆ ಸೇರಿ ಆರು ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಮಹಲಿಂಗಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ಮಹಲಿಂಗಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಅವೈಜ್ಞಾನಿಕ ರಸ್ತೆ ಮತ್ತು ರೋಡ್ ಬ್ರೆಕರ್ ಇಲ್ಲದೆ ಇರುವುದು ಕೂಡ ಕಾರಣ ಎಂದು ಸ್ಥಳೀಯರು ಆಗ್ರಹಸಿದ್ದಾರೆ.
ಪತ್ನಿ ಸವಿತಾ ಹಾಗೂ ಮಗ ಪ್ರವೀಣನ್ನು ಕಳೆದುಕೊಂಡ ತಂದೆ ಶಂಕ್ರಪ್ಪರ ಆಕ್ರಂದನ ಮುಗಿಲು ಮುಟ್ಟಿದೆ. ಟ್ರ್ಯಾಕ್ಟರ್ ಚಾಲಕ ಸಾರಾಯಿ ಕುಡಿದಿದ್ದ ಎನ್ನಲಾಗಿದ್ದು, ಇಂತಹ ನೀಚರಿಗೆ ಶಿಕ್ಷೆಯಾಗಲೀ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.