ಚಾಮರಾಜನಗರ: ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೆಬ್ಬಸೂರಿನಲ್ಲಿ ನಡೆದಿದೆ.
ತಾಯಿ ಮಂಜುಳಾ ಮತ್ತು ಮಗಳು ಶ್ರಾವ್ಯಶ್ರೀ ಮೃತ ದುರ್ದೈವಿಗಳು. ಹೆಬ್ಬಸೂರಿನ ಬಳಿ ಇರುವ ಸುವರ್ಣಾವತಿ ಹೊಳೆಯಲ್ಲಿ ಈ ಘಟನೆ ನಡೆದಿದೆ. ಮೃತ ಮಂಜುಳಾ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸ್ನಾನಕ್ಕೆಂದು ಸುವರ್ಣಾವತಿ ಹೊಳೆಗೆ ಇಳಿದಿದ್ದರು.
ಇದೇ ಸಂದರ್ಭದಲ್ಲಿ ಹೊಳೆಯ ಮೇಲ್ಭಾಗ ಹಾದು ಹೋಗಿದ್ದ ವಿದ್ಯುತ್ ತಂತಿ ಇದ್ದಕ್ಕಿದ್ದಂತೆ ತುಂಡಾಗಿ ಹೊಳೆಯ ನೀರಿನೊಳಗೆ ಬಿದ್ದಿದೆ. ಇದರಿಂದ ನೀರಿನಲ್ಲಿ ವಿದ್ಯುತ್ ಹರಿದು ಮಂಜುಳಾ ಹಾಗೂ ಮಗಳು ಶ್ರಾವ್ಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗಳು ಯಶಶ್ರೀ ಅಪಾಯದಿಂದ ಪಾರಾಗಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.