ಕಲಬುರಗಿ: ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಆಳಂದ ತಾಲೂಕಿನ ಹಿತ್ತಲಶಿರೂರು ಗ್ರಾಮದಲ್ಲಿ ಗೋಡೆ ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿತ್ತಲಶಿರೂರು ಗ್ರಾಮದ ಲಕ್ಷ್ಮೀಬಾಯಿ(30) ಮಕ್ಕಳಾದ ಯಲ್ಲಮ್ಮ(11) ಹಾಗೂ ಅಂಬಿಕಾ (10) ಮೃತ ದುರ್ದೈವಿಗಳಾಗಿದ್ದಾರೆ. ಬುಧವಾರ ತಡರಾತ್ರಿ 2ರ ಸುಮಾರಿಗೆ ಏಕಾಏಕಿ ಸುರಿದ ಭಾರೀ ಮಳೆಗೆ ಭೀಮಶಾ ಎಂಬವರ ಮನೆಯ ಗೋಡೆಯು ಪಕ್ಕದ ಪ್ರಭು ಎಂಬವರ ಮನೆಯ ಮೇಲೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನಾಲ್ವರ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಪ್ರಭು ಎಂಬವರು ಸಾವಿನಿಂದ ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಕೂಡಲೇ ಪ್ರಭುರವರನ್ನು ರಕ್ಷಿಸಿ ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ನಿಂಬರ್ಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆ ಸಂಬಂಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv