ಬೆಂಗಳೂರು: ಕೊರೊನಾ ವೈರಸ್ ಭೀತಿ ದೇವರಿಗೂ ತಟ್ಟಿದ್ದು, ಬೆಂಗಳೂರಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ, ಪ್ರಸಾದ ವಿತರಣೆಗೆ ಬ್ರೇಕ್ ಬಿದ್ದಿದೆ.
ಕೊರೊನಾ ವೈರಸ್‍ನ ಹಾವಳಿ ಇರುವುದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂಬ ಸೂಚನಾ ಫಲಕವನ್ನ ದೇಗುಲಗಳ ಮುಂದೆ ಹಾಕಲಾಗಿದೆ. ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 60 ದೇವಸ್ಥಾನಗಳಿವೆ. 60 ದೇಗುಲಗಳ ಪೈಕಿ ಹಲವು ದೇಗುಲಗಳಲ್ಲಿ ರಥೋತ್ಸವ, ಜಾತ್ರ ಮಹೋತ್ಸವ ಮುಕ್ತವಾಗಿವೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬನಶಂಕರಿ, ಯಡಿಯೂರು, ಗವಿಗಂಗಾಧರೇಶ್ವರ, ಕಾಡುಮಲ್ಲೇಶ್ವರಂ ಸೇರಿದಂತೆ ಹಲವು ದೇಗುಲಗಳಲ್ಲಿ ಭಕ್ತರ ಪ್ರವೇಶವನ್ನ ನಿಷೇಧಿಸಲಾಗಿದೆ.
ದೇಗುಲಗಳಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿದೆ. ದೇವಸ್ಥಾನಗಳಿಗೆ ಪ್ರವೇಶವಿಲ್ಲ ಎಂಬ ಮಾಹಿತಿ ಇಲ್ಲದೇ ಕೆಲ ಭಕ್ತರು ದೇಗುಲಕ್ಕೆ ಬರುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ದೇಗುಲದ ಹೊರಗಡೆಯೇ ಕೈಗಳನ್ನು ಶುದ್ಧವಾಗಿ ತೊಳೆದುಕೊಂಡು ದೇಗುಲದೊಳಗೆ ಪ್ರವೇಶ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ವಿಜಯನಗರದ ಕೊದಂಡರಾಮ ಸ್ವಾಮಿ ದೇಗುಲದಲ್ಲಿಯೂ ಪೂಜೆ- ಹೋಮವನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.