– ಮಂಡ್ಯ ಬಸ್ ದುರಂತದ ನಂತ್ರವೂ ಎಚ್ಚೆತ್ತುಕೊಳ್ಳದ ಇಲಾಖೆ
ಕಲಬುರಗಿ: ಮಂಡ್ಯದ ಕನಕನಮರಡಿ ಬಸ್ ದುರಂತದ ನಂತರ ಸಹ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಇಂದಿಗೂ ಸಹ ಈಶಾನ್ಯ ಸಾರಿಗೆಯಲ್ಲಿ ಬಹುತೇಕ ಡಕೋಟಾ ಬಸ್‍ಗಳೇ ಸಂಚರಿಸುತ್ತಿದ್ದು, ಅದರಲ್ಲಿ ಕೆಲ ಬಸ್‍ಗಳಿಗೆ ಬ್ರೇಕ್ ಮತ್ತು ಪಿಕಪ್ ಇಲ್ಲ, ಇನ್ನುಳಿದ ಬಸ್‍ಗಳ ಏಂಜಿನ್ ಯಾವಾಗ ಬೇಕಾದರೂ ಸ್ಫೋಟವಾಗಬಹುದು. ಖುದ್ದು ಸಾರಿಗೆ ಇಲಾಖೆಯ ಅಧಿಕಾರಿಗಳು ಆರ್ ಟಿಐನಡಿ ಕೇಳಿದ ಪ್ರಶ್ನೆಗೆ ಈ ಉತ್ತರಗಳನ್ನು ನೀಡಿದ್ದಾರೆ.
ಬಸ್‍ನ ಬ್ರೇಕ್ ಮತ್ತು ಗೇರ್ ಲಿವರ್ ಗಳಿಗೆ ವಯರ್ ನಿಂದ ಬಿಗಿದು ರಸ್ತೆ ಮೇಲೆ ಸಂಚರಿಸುತ್ತಿರುವ ಈ ಬಸ್‍ಗಳು, ಈಶಾನ್ಯ ಸಾರಿಗೆಯ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯ.
ಬಹುತೇಕ ಬಸ್‍ಗಳಲ್ಲಿ ಬ್ರೇಕ್ ಹಿಡಿಯಬೇಕು ಅಂದರೆ ಡ್ರೈವರ್ ಗಳು ಹರಸಾಹಸ ಪಟ್ಟು ಬ್ರೇಕ್ ಹಾಕುತ್ತಾರೆ. ಬಹುತೇಕ ಬಸ್‍ಗಳ ಏಂಜಿನ್ ಜಾಸ್ತಿ ಹೀಟ್ ಆಗುತ್ತಿದ್ದು ಯಾವಾಗ ಬೇಕಾದರೂ ಅಗ್ನಿ ಅವಘಡ ನಡೆಯುವ ಸಾಧ್ಯತೆಯಿದೆ.
ಈಶಾನ್ಯ ಸಾರಿಗೆ ಬಸ್‍ಗಳ ಸ್ಥಿತಿಯನ್ನು ಕಂಡು ಆರ್ ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಅವರು ಪ್ರಶ್ನೆ ಕೇಳಿದ್ದಕ್ಕೆ ಶಾಕಿಂಗ್ ಉತ್ತರ ಸಿಕ್ಕಿದೆ. ಸಾರಿಗೆ ಇಲಾಖೆಯ ಡಿಫೆಕ್ಟ್ ರಿಜಿಸ್ಟರ್ ಬುಕ್ ಮಾಹಿತಿ ಪ್ರಕಾರ ಶೇ.50ಕ್ಕೂ ಹೆಚ್ಚು ಬಸ್ಸುಗಳಲ್ಲಿ ಸಮಸ್ಯೆ ಇದೆ. ಸದ್ಯ ಕಲಬುರಗಿ ಡಿಪೋ ನಂಬರ್ 4ರಲ್ಲಿ ಒಟ್ಟು 108 ಬಸ್ ಗಳಿದ್ದು, ಬಸ್ ಡಿಫಾಲ್ಟ್ ರಿಜಿಸ್ಟರ್ ನಲ್ಲಿ 70 ಕ್ಕೂ ಹೆಚ್ಚು ಬಸ್ ಗಳಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಪತ್ತೆಯಾಗಿದೆ. ಈಶಾನ್ಯ ವಲಯದಲ್ಲಿ 9 ವಿಭಾಗಗಳ 50 ಘಟಕಗಳಲ್ಲಿ ಇರುವ ಬಹುತೇಲ ಬಸ್ಸುಗಳು ಒಂದಿಲ್ಲ ಒಂದು ತಾಂತ್ರಿಕ ಸಮಸ್ಯೆಯಿಂದ ಕೂಡಿದೆ.
ಅದರಲ್ಲಿ ಹಲವು ಬಸ್ ಗಳಲ್ಲಿ ಬ್ರೇಕ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಚಾಲಕರು ದೂರು ನೀಡಿದ್ದಾರೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಇಲ್ಲಿನ ಅಧಿಕಾರಿಗಳು ಮಾತ್ರ ರಿಪೇರಿ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾದರೆ ಈ ಬಸ್‍ನಲ್ಲಿ ನಾವು ಹೇಗೆ ಸಂಚರಿಸಬೇಕು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv