ಮಸೀದಿಯಲ್ಲಿ ಹಿಂದೂ ಜೋಡಿಯ ವಿವಾಹ- ಸೌರ್ಹಾದತೆಯ ಅಪರೂಪದ ಮದ್ವೆ

Public TV
2 Min Read
marriage 2

ತಿರುವನಂತಪುರಂ: ದೇಶದೆಲ್ಲೆಡೆ ಪೌರತ್ವ ಕಾಯ್ದೆಯ ಬಗ್ಗೆ ಪ್ರತಿಭಟನೆ ನಡೆಯುತ್ತಿದೆ. ಆದರೆ ಕೇರಳದಲ್ಲಿ ಹಿಂದೂ ಮತ್ತು ಮುಸ್ಲಿಂ ಸೌರ್ಹಾದತೆಯ ಒಂದು ಅಪರೂಪದ ಮದುವೆ ನಡೆದಿದೆ. ಮಸೀದಿ ಸಮಿತಿಯೊಂದು ಹಿಂದೂ ಜೋಡಿಯ ಮದುವೆಯನ್ನು ಸರಳವಾಗಿ ಮಸೀದಿಯೊಳಗೆ ಹಿಂದೂ ಸಂಪ್ರದಾಯದಂತೆ ಮಾಡಿರುವ ಅಪರೂಪದ ಘಟನೆ ನಡೆದಿದೆ.

ವಧು ಆಶಾ ಮತ್ತು ವರ ಶರತ್ ಜೋಡಿಯ ವಿವಾಹ ಸೌಹಾರ್ದತೆಗೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಭಾನುವಾರ ಈ ಜೋಡಿಯ ಮದುವೆ ನಡೆದಿದ್ದು, ಚೇರಾವಲ್ಲಿ ಮುಸ್ಲಿಂ ಜಮಾತ್ ಮಸೀದಿ ಈ ದಂಪತಿಗೆ ಮದುವೆ ಮಾಡಿಸಿದೆ.

20tval1 wedding

ವಧು ಆಶಾ ತಂದೆ ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರಿಗೆ ಮೂವರು ಹೆಣ್ಣುಮಕ್ಕಳಿದ್ದರು. ಇವರಲ್ಲಿ ಆಶಾ ಹಿರಿಯರಾಗಿದ್ದರು. ತಂದೆಯ ಸಾವಿನಿಂದ ಈ ಕುಟುಂಬಕ್ಕೆ ಆರ್ಥಿಕ ಸಮಸ್ಯೆ ಎದುರಾಯಿತು. ಆಗ ವಧುವಿನ ತಾಯಿ ಬಿಂದು ಮಸೀದಿ ಸಮಿತಿ ಬಳಿ ಸಹಾಯ ಕೇಳಿದ್ದಾರೆ. ತಕ್ಷಣ ಮಸೀದಿ ಸಮಿತಿ ಮದುವೆಗೆ ಹಣ ನೀಡಲು ಒಪ್ಪಿಗೆ ಸೂಚಿದ್ದಲ್ಲದೆ, ಮದುವೆ ನಡೆಸಲು ಸ್ಥಳವನ್ನು ಕೂಡ ನೀಡಿತ್ತು.

ಮಸೀದಿ ಸಮಿತಿಯೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಮದುವೆಯನ್ನು ಮಾಡಿಸಿದೆ. ಇವರಿಬ್ಬರ ಮದುವೆಗಾಗಿ ಮಸೀದಿಯ ಒಳಗೆ ಸಣ್ಣ ಮಂಟಪವನ್ನು ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಅಲ್ಲದೇ ಸಮಿತಿಯು 10 ಗ್ರಾಂ ಚಿನ್ನ ಮತ್ತು 2 ಲಕ್ಷ ರೂಪಾಯಿಯನ್ನು ನವ ಜೋಡಿಗೆ ಉಡುಗೊರೆಯಾಗಿ ನೀಡಿದೆ. ದಂಪತಿಯ ಕುಟುಂಬಸ್ಥರಲ್ಲದೆ ಎರಡೂ ಧರ್ಮದ ಸ್ನೇಹಿತರು ಹಾಗೂ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.

ಇದು ಕೋಮು ಸೌಹಾರ್ದತೆಯನ್ನು ಸೂಚಿಸುವ ಅಪರೂಪದ ಮದುವೆಯಾಗಿದೆ. ಹಿಂದೂ ಆಚರಣೆಗಳ ಪ್ರಕಾರ ಮದುವೆ ನಡೆಯಿತು. ಬಿರಿಯಾನಿ ಜೊತೆಗೆ ಸಸ್ಯಾಹಾರಿ ಊಟವನ್ನು ಕೂಡ ಮಾಡಿಸಲಾಗಿತ್ತು. ಸುಮಾರು 1,000 ಜನರಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು ಎಂದು ಸಮಿತಿಯ ಕಾರ್ಯದರ್ಶಿ ನುಜುಮುದ್ದೀನ್ ಅಲುಮ್ಮುಟ್ಟಿಲ್ ತಿಳಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ವಿವಾಹ ಕೇರಳದ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಚೇರಾವಲ್ಲಿ ಮುಸ್ಲಿಂ ಜಮಾತ್ ಮಸೀದಿ ಆಶಾ ಮತ್ತು ಶರತ್ ಹಿಂದೂ ಜೋಡಿಯ ಮದುವೆಯನ್ನು ಆಯೋಜಿಸಿತ್ತು. ವಧುವಿನ ತಾಯಿ ಸಹಾಯ ಕೇಳಿದ ತಕ್ಷಣ ಮಸೀದಿ ಸಮಿತಿ ಅವರಿಗೆ ಸಹಾಯದ ಹಸ್ತ ನೀಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೇ ನವ ವಿವಾಹಿತರಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಮದುವೆಯಲ್ಲಿ ಭಾಗಿಯಾಗಿದ್ದ ಕುಟುಂಬದವರು, ಮಸೀದಿ ಅಧಿಕಾರಿಗಳು ಮತ್ತು ಎರಡು ಧರ್ಮದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *