Connect with us

Latest

ಮೋದಿ ವಿರುದ್ಧ ಅವಹೇಳನಕಾರಿ ಫೋಟೋ ಪೋಸ್ಟ್ – 1 ವರ್ಷ ಸೋಷಿಯಲ್ ಮಿಡಿಯಾ ಬಳಸದಂತೆ ಬ್ಯಾನ್

Published

on

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ವ್ಯಂಗ್ಯವಾಗಿ ಎಡಿಟ್ ಮಾಡಿ, ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದ ತಮಿಳುನಾಡಿನ ಯುವಕನಿಗೆ ಮದ್ರಾಸ್ ಹೈಕೋರ್ಟ್ 1 ವರ್ಷ ಸಾಮಾಜಿಕ ಜಾಲತಾಣ ಬಳಸದಂತೆ ನಿಷೇಧ ಹೇರಲಾಗಿದೆ.

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಿವಾಸಿ ಜಬಿನ್ ಚಾರ್ಲ್ಸ್ ಫೇಸ್‌ಬುಕ್‌ನಲ್ಲಿ ಮೋದಿ ಅವರ ವ್ಯಂಗ್ಯ ಫೋಟೋವನ್ನು ಹಂಚಿಕೊಂಡಿದ್ದನು. ಇದನ್ನು ನೋಡಿ ಬಿಜೆಪಿ ಕಾರ್ಯಕರ್ತ ನಂಜಿಲ್ ರಾಜ ಅವರು ಚಾರ್ಲ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಗೌರವಾನ್ವಿತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಅವಮಾನ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು ಚಾರ್ಲ್ಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಆದ್ದರಿಂದ ಚಾರ್ಲ್ಸ್ ನಿರೀಕ್ಷಣಾ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದನು. ಈ ಸಂಬಂಧ ಸೋಮವಾರ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ, ಚಾರ್ಲ್ಸ್ ಗೆ  ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜೊತೆಗೆ 1 ವರ್ಷ ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ ಎಂದು ನಿಷೇಧ ಹೇರಿದೆ.

ಅಷ್ಟೇ ಅಲ್ಲದೆ ಪ್ರಧಾನಿಯನ್ನು ಅವಮಾನಿಸಿದ್ದಕ್ಕೆ ಕ್ಷಮೆ ಕೋರಿ ಕ್ಷಮಾಪಣ ಪತ್ರ ಬರೆದು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶಿಸಿದೆ. ಆದರೆ ಒಂದು ವೇಳೆ ಚಾರ್ಲ್ಸ್ ನಿಷೇಧ ಹೇರಿದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ, ಆತನಿಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವುದಾಗಿ ನ್ಯಾಯಾಲಯ ಎಚ್ಚರಿಸಿದೆ.

ನಿರೀಕ್ಷಣಾ ಜಾಮೀನಿನ ಅರ್ಜಿಯಲ್ಲಿ ಚಾರ್ಲ್ಸ್, ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾನೆ. ನಾನು ಅಪ್ಲೋಡ್ ಮಾಡಿದ್ದ ಫೋಟೋಗಳನ್ನು ನಾನು ಬ್ಲಾಕ್ ಮಾಡಿದ್ದೇನೆ. ದೇಶದ ಯಾವ ಪ್ರಜೆಗೂ ಪ್ರಧಾನಿಗೆ ಅಗೌರವಿಸುವ ಹಕ್ಕಿಲ್ಲ. ಹಾಗೆಯೇ ಪತ್ರಿಕೆಗಳಲ್ಲಿ ತಾನು ಮೋದಿ ವ್ಯಂಗ್ಯಚಿತ್ರ ಮಾಡಿ, ಟೀಕಿಸಿದ್ದಕ್ಕೆ ಕ್ಷಮೆಯಾಚಿಸಲು ಸಿದ್ಧ ಎಂದಿದ್ದಾನೆ.

ಸುಪ್ರೀಂ ಕೋರ್ಟಿನ ಪ್ರಕಾರ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ತಿಳಿಸುವುದು, ಸಾರ್ವಜನಿಕ ವೇದಿಕೆಯಲ್ಲಿ ಮುಕ್ತವಾಗಿ ಮಾತನಾಡುವುದು ಅಪರಾಧವಲ್ಲ. ಆದರೂ ತಾನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದೇನೆ. ಕ್ಷಮೆಕೊರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾನೆ.

Click to comment

Leave a Reply

Your email address will not be published. Required fields are marked *