ಬೀದರ್: ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ಎಫೆಕ್ಟ್‌ಗೆ ಒಂದೇ ವಾರದಲ್ಲಿ ಬರೋಬ್ಬರಿ 91ಕ್ಕೂ ಅಧಿಕ ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿಗಳು ಕುಸಿದು ಬಿದ್ದು ಜನರು ಕಂಗಾಲಾಗಿದ್ದಾರೆ.
ಇಂದು ಸುರಿದ ಧಾರಾಕಾರ ಮಳೆಗೆ ಒಂದೇ ಗ್ರಾಮದ ಅಂಚೆ ಕಚೇರಿ ಸೇರಿದಂತೆ 5ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಯ ರಗಳೆಗೆ ಗಡಿ ಜಿಲ್ಲೆ ಬೀದರ್‌ನ ಜನರು ತತ್ತರಿಸಿ ಹೋಗಿದ್ದಾರೆ. ಇದನ್ನೂ ಓದಿ: ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ
ಗಡಿ ಜಿಲ್ಲೆ ಬೀದರ್‌ನಲ್ಲಿ ಸತತ ಒಂದು ವಾರಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಬೀದರ್ ತಾಲೂಕಿನ ಸಿಂಧೋಲ್ ಗ್ರಾಮದಲ್ಲಿ 5ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಗ್ರಾಮದ ಅಬ್ದುಲ್ ರಜಾಕ್, ರಜಿಯಾ ಬೇಗಂ, ಪುಷ್ಪಾವತಿ, ಸುಜಾತ ಎಂಬವರ ಮನೆಗಳು ಸೇರಿದಂತೆ ಅಂಚೆ ಕಚೇರಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡು ಜನರು ವಾಸ ಮಾಡಲು ಬೇರೆ ಮನೆಗಳು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಮಾಡಿದರಷ್ಟೇ ತುತ್ತಿನ ಚೀಲ ತುಂಬುತ್ತೆ. ಆದರೆ ವರುಣನ ಅಬ್ಬರದಿಂದ ಇತ್ತ ಕೆಲಸವೂ ಇಲ್ಲ. ತಿನ್ನೋಕೆ ಅನ್ನವೂ ಇಲ್ಲದೇ ಜನ ಪರದಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ, ಮುಡಾ ಹಗರಣ; ಸರ್ಕಾರದ ವಿರುದ್ಧ ವಿಪಕ್ಷ ನಾಯಕರಿಂದ ಅಹೋರಾತ್ರಿ ಧರಣಿ
ಧಾರಾಕಾರವಾಗಿ ಸುರಿಯುತ್ತಿರೋ ಮಳೆಯಿಂದ 90ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಬಸವಕಲ್ಯಾಣದಲ್ಲಿ 23, ಬೀದರ್‌ನಲ್ಲಿ 13, ಭಾಲ್ಕಿಯಲ್ಲಿ 12, ಹುಮ್ನಾಬಾದ್‌ನಲ್ಲಿ 11, ಚಿಟಗುಪ್ಪದಲ್ಲಿ 12, ಔರಾದ್‌ನಲ್ಲಿ 11, ಕಮಲನಗರದಲ್ಲಿ 4 ಹಾಗೂ ಹುಲಸೂರಿನಲ್ಲಿ 5 ಮನೆಗಳು ನೆಲಕಚ್ಚಿವೆ. ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ.