– ಯುಗಾದಿ ಹಬ್ಬದ ಹೊಸತೊಡಕಿಗೆ ಮಾರಾಟ ಮಾಡಿ ಹಣ ಗಳಿಸಲು ಕಳ್ಳರಿಂದ ಕೃತ್ಯ
ಚಿಕ್ಕಬಳ್ಳಾಪುರ: ಒಂದೇ ದಿನ ಎರಡು ಗ್ರಾಮಗಳಲ್ಲಿ 80 ಕ್ಕೂ ಹೆಚ್ಚು ಹಂದಿಗಳನ್ನ ಕಳ್ಳರು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭಿನ್ನಮಂಗಲ ಗ್ರಾಮದಲ್ಲಿ ನಡೆದಿದೆ.
ಭೈರಸಂದ್ರ ಗ್ರಾಮದ ದಿವಾಕರ್ ಎಂಬ ರೈತನ ತೋಟದ ಮನೆ ಬಳಿ ಇದ್ದ ಹಂದಿಗಳ ಶೆಡ್‌ಗೆ ನುಗ್ಗಿ 30 ಕ್ಕೂ ಹೆಚ್ಚು ಹಂದಿಗಳನ್ನ ಕಳವು ಮಾಡಲಾಗಿದೆ. ಹಂದಿಗಳ ಶೆಡ್‌ಗೆ ಅಡ್ಡಲಾಗಿ ನಿಲ್ಲಿಸಿದ್ದ ರೈತನ ಬೊಲೆರೋ ವಾಹನವನ್ನೇ ಹಳ್ಳಕ್ಕೆ ತಳ್ಳಿ ಹಂದಿಗಳನ್ನ ಕಳವು ಮಾಡಿದ್ದಾರೆ. ಹಂದಿಗಳ ಕಳವು ವೇಳೆ ಕಾರೊಂದು ಬಂದ ಕಾರಣ ಅರ್ಧಂಬರ್ಧ ಹಂದಿಗಳನ್ನ ಕಳವು ಮಾಡಿಕೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ.
ದೇವನಹಳ್ಳಿ ತಾಲೂಕಿನ ಭಿನ್ನಮಂಗಲ ಗ್ರಾಮದ ರೈತ ಲೋಕೇಶ್ ಎಂಬವರು 200 ಹಂದಿಗಳನ್ನ ಸಾಕಾಣಿಕೆ ಮಾಡಿದ್ದು, ಅದರಲ್ಲಿ 49 ಹಂದಿಗಳನ್ನ ಕಳವು ಮಾಡಿಕೊಂಡು ಹೋಗಿದ್ದಾರೆ. ಹಂದಿಗಳ ಶೆಡ್‌ಗೆ ನುಗ್ಗಿರುವ ಆರು ಮಂದಿ ಕಳ್ಳರ ತಂಡ ಹಂದಿಗಳನ್ನ ಬೊಲೆರೋ ವಾಹನಕ್ಕೆ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿನ್ನಮಂಗಲ ಗ್ರಾಮದ ಕಳವು ಪ್ರಕರಣ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಭೈರಸಂದ್ರ ಗ್ರಾಮದಲ್ಲಿನ ಕಳವು ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುಗಾದಿ ಹಬ್ಬದ ಹೊಸತೊಡಕಿಗೆ ಮಾರಾಟ ಮಾಡಿ ಕಾಸು ಮಾಡಿಕೊಳ್ಳಬೇಕೇಂಬ ಆಸೆಯಿಂದ ರೈತರಿಗೆ ಹಂದಿ ಕಳ್ಳರು ಶಾಕ್ ಕೊಟ್ಟಿದ್ದಾರೆ. ಹಂದಿ ಕಳ್ಳರ ಕಾಟಕ್ಕೆ ಸಾಕಾಣಿಕೆದಾರರು ಹಿಡಿಶಾಪ ಹಾಕಿದ್ದು, ಆದಷ್ಟು ಬೇಗ ಕಳ್ಳರನ್ನ ಹಿಡಿಯುವಂತೆ ಆಗ್ರಹಿಸಿದ್ದಾರೆ.