ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ದಾಖಲೆಯ ಸಂಖ್ಯೆಯಲ್ಲಿ ಜನರು ಪಲಾಯನಗೈಯುತ್ತಿದ್ದಾರೆ. ಕೇವಲ ಕಳೆದ 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ದೇಶ ತೊರೆದಿದ್ದಾರೆ. ಅದರಲ್ಲೂ ಹೆಚ್ಚಾಗಿ ವೈದ್ಯರು, ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ತಜ್ಞರು ಸೇರಿದಂತೆ ಬಹುತೇಕ ವಿದ್ಯಾವಂತರೇ ಇತರ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಪಾಕಿಸ್ತಾನದ ಆರ್ಥಿಕತೆ ಭಾರೀ ಕುಸಿತ (Economic Crisis) ಕಂಡಿದೆ. ಹಣದುಬ್ಬರ, ನಿರುದ್ಯೋಗ, ಅನಿಶ್ಚಿತ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚಿಂತಿತರಾಗಿರೋ ಲಕ್ಷಾಂತರ ಜನರು ಉದ್ಯೋಗ ಹುಡುಕಲು ಇತರ ದೇಶಗಳಿಗೆ ತೆರಳುತ್ತಿದ್ದಾರೆ. ಆದರೂ ಅಂಕಿ ಅಂಶಗಳು ಒಂದು ಲೆಕ್ಕ ತೋರಿಸಿದರೆ ಅದರ ಅರ್ಧದಷ್ಟು ಜನರು ಅಕ್ರಮವಾಗಿಯೇ ಇತರ ದೇಶಗಳಿಗೆ ಪಲಾಯನಗೈಯುತ್ತಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಪಾಕ್ ತೊರೆದಿರೋರು ಎಷ್ಟು ಜನ?
ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಅಂಕಿಅಂಶದ ಪ್ರಕಾರ ಈ ವರ್ಷದ ಜೂನ್‍ವರೆಗೆ 8.32 ಲಕ್ಷ ಪಾಕಿಸ್ತಾನಿಯರು ತಮ್ಮ ದೇಶವನ್ನು ತೊರೆದಿದ್ದಾರೆ. ಅದರಲ್ಲಿ ಸುಮಾರು 4 ಲಕ್ಷ ಜನ ವಿದ್ಯಾವಂತರು ಹಾಗೂ ಉನ್ನತ ಹುದ್ದೆ ಹೊಂದಿದವರೇ ಆಗಿದ್ದಾರೆ. ಕಳೆದ ವರ್ಷ ಸುಮಾರು 7.65 ಲಕ್ಷ ಮಂದಿ ಪಾಕಿಸ್ತಾನ ತೊರೆದಿದ್ದರು. ಅವರಲ್ಲಿ ಸುಮಾರು ಒಂದು ಲಕ್ಷ ಜನ ನುರಿತ ವೃತ್ತಿಪರರೇ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ದೊಡ್ಡ ಪ್ರಮಾಣದ ವಲಸೆಗೆ (Immigration) ಸಾಕ್ಷಿಯಾಗಿದ್ದರೂ, ವಿದ್ಯಾವಂತರು ಹಾಗೂ ವೃತ್ತಿಪರರರೇ ದೇಶ ತೊರೆಯುತ್ತಿರುವುದು ಕಾಳಜಿಯ ವಿಷಯವಾಗಿದೆ.
Advertisement
2021ರಲ್ಲಿ 2.25 ಲಕ್ಷ ಪಾಕಿಸ್ತಾನಿಗಳು ವಿದೇಶ ತೆರಳಿದ್ದಾರೆ. ಇದು 2022ಕ್ಕೆ ಹೋಲಿಸಿದರೆ ವಲಸೆ ಹೋದವರ ಸಂಖ್ಯೆ 3 ಪಟ್ಟು ಹೆಚ್ಚಾಗುತ್ತದೆ. 2020ರಲ್ಲಿ 2.8 ಲಕ್ಷ ಜನ ದೇಶ ತೊರೆದಿದ್ದಾರೆ. ಗಮನಾರ್ಹ ವಿಚಾರ ಏನೆಂದರೆ 2020-21ರಲ್ಲಿ ಪ್ರಪಂಚ ಕೊರೊನಾದ ಸಂಕಷ್ಟ ಎದುರಿಸುತ್ತಿತ್ತು ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.
Advertisement
ಯಾವ ಪ್ರದೇಶದಲ್ಲಿ ಪಲಾಯನ ಹೆಚ್ಚು?
ಇಡೀ ಪಾಕಿಸ್ತಾನದಲ್ಲಿ ಭಾರತದ ಜೊತೆ ಗಡಿಯಾಗಿರುವ ಪಂಜಾಬ್ ಪ್ರಾಂತ್ಯದಿಂದಲೇ ಅರ್ಧಕ್ಕಿಂತಲೂ ಹೆಚ್ಚು ಜನರು ದೇಶವನ್ನು ತೊರೆಯುತ್ತಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ತಿಳಿಸಿದೆ. ಸುಮಾರು 27,000 ಜನ ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಬಂದವರು ಎನ್ನಲಾಗಿದೆ.
ಯಾವ ದೇಶಗಳಿಗೆ ಪಲಾಯನ?
2022ರ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ಅಧಿಕೃತವಾಗಿ ಹೆಚ್ಚಿನ ಪಾಕಿಸ್ತಾನಿಗಳು ಪಶ್ಚಿಮ ಏಷ್ಯಾದ ದೇಶಗಳಿಗೆ, ಪ್ರಮುಖವಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ವಲಸೆ ಹೋಗಿದ್ದಾರೆ. ಯುರೋಪ್‍ನಲ್ಲಿ ಹೆಚ್ಚಿನ ಪಾಕಿಸ್ತಾನಿಗಳು ರೋಮೇನಿಯಾಗೆ ತೆರಳಲು ಹೆಚ್ಚು ಆದ್ಯತೆ ನೀಡಿದ್ದಾರೆ.
ಇಷ್ಟಕ್ಕೂ ಸುಲಭದ ಸ್ಥಳಾಂತರ ಹೇಗೆ ಸಾಧ್ಯ?
ಪಾಕಿಸ್ತಾನಿಗಳು ಅಧಿಕೃತವಾಗಿ ಇತರ ದೇಶಗಳಿಗೆ ಸುಲಭವಾಗಿ ಸ್ಥಳಾಂತರವಾಗಲು ಒಂದು ಮುಖ್ಯ ಅನುಕೂಲವೇ ಉಭಯ ಪೌರತ್ವ. ಇತರ ದೇಶಗಳಿಗೆ ವಲಸೆ ಹೋಗುವ ಪಾಕಿಸ್ತಾನಿಯರು ತಮ್ಮ ಪಾಕಿಸ್ತಾನಿ ಪಾಸ್‍ಪೋರ್ಟ್‍ಗಳನ್ನು ಉಳಿಸಿಕೊಂಡು ಅದನ್ನು ಪ್ರಯಾಣಕ್ಕೂ ಬಳಸಬಹುದು. ಈ ಒಂದು ಅನುಕೂಲದಿಂದಾಗಿ ಭ್ರಷ್ಟಾಚಾರ ಎಸಗಿದವರು ಸುಲಭವಾಗಿ ಇತರ ದೇಶಗಳಲ್ಲಿ ಹಣ ಕೂಡಿಟ್ಟು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಕ್ಯಾಬಿನೆಟ್‍ನಲ್ಲಿದ್ದ 7ಕ್ಕೂ ಹೆಚ್ಚು ಸಚಿವರು ದ್ವಿಪೌರತ್ವ ಅನುಕೂಲದಿಂದ ಬೇರೆ ದೇಶಗಳಲ್ಲಿ ಶಾಶ್ವತ ಮನೆಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಐಫೆಲ್ ಟವರ್‌ನ ರೋಚಕ ಇತಿಹಾಸ
ಸಾಲದ ಕೂಪದಲ್ಲಿ ಪಾಕ್:
ಇದೀಗ ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹಾನಿಗೊಳಗಾಗಿರುವ ಪಾಕಿಸ್ತಾನ ಇತರ ಮೂಲಗಳಿಂದ ಎರವಲು ಪಡೆದ ಹಣದಿಂದ ಆರ್ಥಿಕತೆಯನ್ನು ಸರಿದೂಗಿಸಲು ಶ್ರಮವಹಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜುಲೈ 12 ರಂದು ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಬೇಲ್‍ಔಟ್ ಪ್ಯಾಕೇಜ್ ಅನ್ನು ನೀಡಿದೆ. ಈ ಮೂಲಕ ಅದರ ಸಾಲ ಮರುಪಾವತಿಯಲ್ಲಿ ಸಹಾಯ ಮಾಡಿದೆ. ಈಗ ಬಾಹ್ಯ ಸಾಲಗಳನ್ನು ತೀರಿಸಲು ಪಾಕ್ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಗಳ ಮೇಲೆಯೂ ಪರಿಣಾಮ ಬೀರುತ್ತಿದೆ.
ಪಾಕಿಸ್ತಾನ ತನ್ನ ಪ್ರಜೆಗಳನ್ನು ಇತರ ದೇಶಗಳಿಂದ ವಾಪಸ್ ಕರೆತರುವುದು ಅದರ ಆರ್ಥಿಕತೆಯ ಪ್ರಮುಖ ಗುರಿಯಾಗಿದೆ. ಆದರೆ ಇದರಿಂದ ದೇಶದ ವ್ಯಾಪಾರದ ಅಸಮತೋಲನವನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನ ತನ್ನ ರಫ್ತಿಗಿಂತಲೂ ಆಮದನ್ನು ಹೆಚ್ಚು ಮಾಡುತ್ತಿದೆ. ಅದು ಭಾರತದ ಮೇಲೆ ಕಣ್ಣಿಟ್ಟುಕೊಂಡು ಮಿಲಿಟರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದೆ.
ಭಯೋತ್ಪಾದನೆ:
ಇಸ್ಲಾಮಿಕ್ ಮೂಲಭೂತವಾದದ ಕಡೆ ಹೆಚ್ಚು ಗಮನಕೊಡುತ್ತಿರೋ ಪಾಕಿಸ್ತಾನ ಹಿಂದಿನಿಂದಲೂ ಭಾರತದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ ಇದೇ ಹೆಚ್ಚುತ್ತಿರುವ ಮೂಲಭೂತವಾದದ ಕಾರಣದಿಂದ ಅದರ ಪ್ರವಾಸೋದ್ಯಮ ಕ್ಷೇತ್ರವನ್ನು ಬಹುತೇಕ ಹದಗೆಡಿಸಿಕೊಂಡಿದೆ. ಹತ್ತಿಯನ್ನು ಉತ್ಪಾದಿಸೋ ದೇಶವಾಗಿದ್ದರೂ ಪಾಕಿಸ್ತಾನ ತನ್ನ ಜವಳಿ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಇದನ್ನೂ ಓದಿ: ಕ್ಯಾನ್ಸರ್ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?
ಪಾಕಿಸ್ತಾನಿಯರಲ್ಲಿ ಹತಾಶೆ:
ಇದೆಲ್ಲದರ ನಡುವೆ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ದೇಶದಲ್ಲಿ ಉದ್ಯಮ ಹಾಗೂ ಕೈಗಾರಿಕೆಗಳನ್ನು ಬದುಕಲು ಬುಡುವುದಿಲ್ಲ, ಅಭಿವೃದ್ಧಿ ಇನ್ನು ದೂರದ ಮಾತು ಎಂದು ವಿದ್ಯಾವಂತರು ದೇಶದ ಕರಾಳ ಭವಿಷ್ಯವನ್ನು ಈಗಾಗಲೇ ಕಂಡಿದ್ದಾರೆ. ಈ ಹಿನ್ನೆಲೆ ಗುಂಪು ಗುಂಪಾಗಿ ಪಾಕಿಸ್ತಾನದಿಂದ ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನವು ಈಗ ಪೂರ್ಣ ಪ್ರಮಾಣದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗಾಗಲೇ ಜನರಲ್ಲಿ ಹತಾಶೆ ಮೂಡಿದ್ದು ಲಕ್ಷಾಂತರ ಜನರನ್ನು ದೇಶ ತೊರೆಯುವಂತೆ ಮಾಡುತ್ತಿದೆ.
Web Stories