ರಸ್ತೆ ಅಗಲೀಕರಣಕ್ಕಾಗಿ 70ಕ್ಕೂ ಹೆಚ್ಚು ಮನೆಗಳ ನೆಲಸಮ – ನೋಟಿಸ್‌ ನೀಡದೆ ತೆರವು ಆರೋಪ

Public TV
1 Min Read
more than 70 houses evacuation without giving notice in ballari

ಬಳ್ಳಾರಿ: ಬಾಪೂಜಿ ನಗರದ ಬಡಾವಣೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳನ್ನು ರಸ್ತೆ ಅಗಲೀಕರಣದ (Road Widening) ನೆಪ ಹೇಳಿ ಯಾವುದೇ ನೋಟಿಸ್ ಕೊಡದೆ ಮಹಾನಗರ ಪಾಲಿಕೆ (Ballari City Corporation) ತೆರವುಗೊಳಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮನೆ ಕಳೆದುಕೊಂಡವರು ಬಹುತೇಕ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವಂತವರು. ರಸ್ತೆ ಪಕ್ಕದಲ್ಲಿ ಸಣ್ಣಪುಟ್ಟ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಈ ಹಿಂದೆ ಇದ್ದ ಬಿಜೆಪಿ (BJP)  ಸರ್ಕಾರ ಇವರಿಗೆ ಮನೆ ಪತ್ರಗಳನ್ನು ಸಹ ನೀಡಿದೆ. ಹೀಗಿದ್ದಾಗ ಏಕಾಏಕಿ ಯಾವುದೇ ನೋಟಿಸ್ ಕೊಡದೆ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಜನ ಆರೋಪಿಸಿದ್ದಾರೆ.

ಮನೆ ಕಳೆದುಕೊಂಡವರಲ್ಲಿ ಬಹಳಷ್ಟು ಜನ ಅಂಗವಿಕಲರು, ವಯೋ ವೃದ್ಧರು ಇದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಪಾಲಿಕೆ ಆಯುಕ್ತರಿಗೆ ಜನ ಮನವಿ ಕೂಡ ಸಲ್ಲಿಕೆ ಮಾಡಿದ್ದಾರೆ. ಈ ವರೆಗೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬೇಟಿ ನೀಡಿಲ್ಲ, ಜನರ ಸಮಸ್ಯೆಯನ್ನು ಆಲಿಸಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪಾಲಿಕೆ ಆಯುಕ್ತರನ್ನ ಜನ ಕೇಳಿದಾಗ ನೋಟಿಸ್ ಕೊಟ್ಟಿದ್ದೇವೆ. ಇದು ಸರ್ಕಾರಿ ಜಾಗ, ನೀವು ಅಕ್ರಮವಾಗಿ ವಾಸ ಮಾಡುತ್ತಿದ್ದೀರಿ. ಹೀಗಾಗಿ ತೆರವು ಮಾಡಲಾಗಿದೆ, ನಿಮಗೆ ಬೇರೆ ಕಡೆ ಜಾಗ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Share This Article