ರಾಯಚೂರು: ಜಿಲ್ಲೆಯ ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಬಳಿ ವಿಷಪೂರಿತ ನೀರು ಸೇವಿಸಿ 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
ಕೃಷಿ ಹೊಂಡವೊಂದರಲ್ಲಿ ನೀರು ಕುಡಿದಿದ್ದ ಕುರಿಗಳು ಅಸ್ವಸ್ಥವಾಗಿದ್ದವು. ಹೊಂಡದ ನೀರೇ ಕುರಿಗಳ ಸಾವಿಗೆ ಕಾರಣ ಅಂತ ಶಂಕಿಸಲಾಗಿದೆ. ಸುಮಾರು 100 ಕುರಿಗಳ ಪೈಕಿ 60 ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಹಲವು ಕುರಿಗಳು ಅಸ್ವಸ್ಥವಾಗಿವೆ. ಸಂಚಾರಿ ಕುರಿಗಾಯಿ ಭೀಮಪ್ಪ ಮಲ್ಲಿನಾಯಕನದೊಡ್ಡಿ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಅಡಿಕೆ ಕೊನೆ ಕೊಯ್ಯುವಾಗ ವಿದ್ಯುತ್ ಸ್ಪರ್ಶ – ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ಸುಮಾರು 5 ಲಕ್ಷ ರೂ.ಗೂ ಅಧಿಕ ನಷ್ಟವಾಗಿದ್ದು, ಘಟನೆಯಿಂದ ಕುರಿಗಾಹಿ ಭೀಮಪ್ಪ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳಕ್ಕೆ ಗಬ್ಬೂರು ಠಾಣೆ ಪೊಲೀಸರು, ಪಶು ವೈದ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಕುರಿಗಾಯಿ ಭೀಮಪ್ಪ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

