ಉತ್ತರ ಕನ್ನಡದಲ್ಲಿ ಬಂದ್ ಆಗುತ್ತಾ 300ಕ್ಕೂ ಹೆಚ್ಚು ಶಾಲೆ..?

Public TV
2 Min Read
KARWAR SCHOOL 1

ಕಾರವಾರ: ಸರ್ಕಾರಿ ಶಾಲೆ (Government School) ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಬಡವರ ಪಾಲಿಗೆ ಸರಸ್ವತಿಯ ದೇಗುಲವಾಗಿದ್ದ ಶಾಲೆ ಮಕ್ಕಳ ಕೊರತೆ ಅಧ್ಯಾಪಕರ ಕೊರತೆಯಿಂದ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಶಾಲೆಗಳನ್ನು ಬಂದ್ ಮಾಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ.

ಬಹುತೇಕ ಅರಣ್ಯ ಹೊಂದಿದ ಹಾಗೂ ಕರ್ನಾಟಕದ ಗಡಿ ಜಿಲ್ಲೆ ಉತ್ತರಕನ್ನಡ (Uttarkannada). 80%ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಗ್ರಾಮ ಗ್ರಾಮಗಳಲ್ಲಿ ಶಾಲೆಗಳನ್ನ ಸ್ಥಾಪಿಸಲಾಗಿತ್ತು. ಕೆಲವೆಡೆ ಗ್ರಾಮಗಳಲ್ಲಿ ಜನಸಂಖ್ಯೆ ಕಡಿಮೆಯಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಿದೆ. ಶಾಲೆ ಮಕ್ಕಳ ಕೊರತೆ ಅಧ್ಯಾಪಕರ ಕೊರತೆಯಿಂದ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಶಾಲೆಗಳನ್ನು ಬಂದ್ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

KARWAR SCHOOL

ಕಾರವಾರದಲ್ಲಿ (Karwar) ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 148 ಶಾಲೆಗಳಿವೆ. ಶಿರಸಿಯಲ್ಲೂ ಸಹ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ 149 ಶಾಲೆಗಳನ್ನ ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಬಹುಪಾಲು ಖಾಯಂ ಶಿಕ್ಷಕರ ಕೊರತೆಯಿದ್ದು ಅತಿಥಿ ಶಿಕ್ಷಕರನ್ನ ತೆಗೆದುಕೊಂಡು ಶಾಲೆ ನಡೆಸಲಾಗುತ್ತಿದೆ. ಆದರೆ ಇದೀಗ ಶಿಕ್ಷಕರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನ ನೆರೆಯ ಶಾಲೆಗಳೊಂದಿಗೆ ವಿಲೀನಗೊಳಿಸುವ ಚಿಂತನೆಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಡ್ರಗ್ಸ್ ಚಾಕ್ಲೇಟ್ ದಂಧೆ- FSL ವರದಿ ಬೆನ್ನಲ್ಲೇ ಇಬ್ಬರ ಬಂಧನ

ಗುಡ್ಡಗಾಡು ಪ್ರದೇಶ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲೇ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಸೇರಿ ಮುನ್ನೂರರಷ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ. ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗೆ ಒಬ್ಬರೇ ಶಿಕ್ಷಕರನ್ನ ನೇಮಕ ಮಾಡುವುದರಿಂದ ಶಾಲೆಗಳಲ್ಲಿ ವಿಷಯಕ್ಕೆ ತಕ್ಕಂತೆ ಶಿಕ್ಷಕರ ಕೊರತೆ ಆಗಲಿದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಪಾಲಕರು ತಮ್ಮ ಮಕ್ಕಳನ್ನ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ, ಬಡ ಕುಟುಂಬಗಳು ದೊಡ್ಡ ಮೊತ್ತದ ಡೊನೇಷನ್ ನೀಡಿ ಖಾಸಗಿ ಶಾಲೆಗೆ ಮಕ್ಕಳನ್ನು ಕಳಿಸೋದು ಕಷ್ಟಕರ. ಹೀಗಿರುವಾಗ ವಿದ್ಯಾರ್ಥಿಗಳು ಕಡಿಮೆಯಿರುವ ಕಾರಣ ನೀಡಿ ಶಾಲೆಯನ್ನ ವಿಲೀನಗೊಳಿಸುವ ಸರ್ಕಾರದ ಕ್ರಮ ಸರಿಯಲ್ಲ ಅಂತ ಸಾಹಿತಿಗಳು ಆಕ್ಷೇಪಿಸಿದ್ದಾರೆ.

ಶಿಕ್ಷಣದಿಂದ ಯಾರೊಬ್ಬರೂ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ತೆರೆದಿರುವ ಸರ್ಕಾರಿ ಶಾಲೆಗಳನ್ನ ವಿದ್ಯಾರ್ಥಿಗಳ ಕೊರತೆ ಹೆಸರಿನಲ್ಲಿ ಸರ್ಕಾರ ಮುಚ್ಚಲು ಮುಂದಾಗುತ್ತಿರೋದು ನಿಜಕ್ಕೂ ದುರಂತ. ಈ ಬಗ್ಗೆ ಶಿಕ್ಷಣ ಸಚಿವರು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಅನ್ನೋದೇ ನಮ್ಮ ಆಶಯ.

Web Stories

Share This Article