ಚಿಕ್ಕಮಗಳೂರು: ಒಂದು ಹಾವು ನೋಡುದ್ರೇನೆ ಜೀವ ಝಲ್ ಅನ್ನುತ್ತೆ. ಅಂತದ್ರಲ್ಲಿ ಒಂದೇ ಜಾಗದಲ್ಲಿ, ಒಂದೇ ಸಮಯದಲ್ಲಿ ಎರಡು ಹಾವುಗಳ ಜೊತೆ 300ಕ್ಕೂ ಅಧಿಕ ಮೊಟ್ಟೆ ಕಂಡು ಬಂದಿರುವ ಘಟನೆ ಕಾಫಿ ನಾಡಿನಲ್ಲಿ ನಡೆದಿದೆ.
ಕಾಫಿನಾಡಿನ ಕಲ್ಯಾಣ ನಗರದ ನಿವಾಸಿ ನವೀನ್ ಎಂಬುವರು ಮನೆ ಕಟ್ಟಲೆಂದು ತಿಂಗಳ ಹಿಂದೆ ಮರಳನ್ನ ಹಾಕಿಸಿದ್ದರು. ಆದರೆ ಈಗ ಕೆಲಸಕ್ಕೆಂದು ಮರಳು ತೆಗೆಯುವಾಗ ಮರಳಿನೊಳಗೆ ಒಂದೇ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಸುಮಾರು 300ಕ್ಕೂ ಅಧಿಕ ಮೊಟ್ಟೆಗಳು ಸಿಕ್ಕಿವೆ. ಜೊತೆಗೆ ಎರಡೂ ಹಾವುಗಳು ಕೂಡ ಕಂಡು ಬಂದಿವೆ.
ಹಾವು ಮತ್ತು ಮೊಟ್ಟೆಗಳನ್ನು ಕೆಲಸಗಾರರು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕೂಡಲೇ ಅವರು ಸ್ನೇಕ್ ನರೇಶ್‍ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ನೇಕ್ ನರೇಶ್ ಸ್ಥಳಕ್ಕೆ ಬಂದು ಎರಡೂ ಹಾವುಗಳ ಜೊತೆ 300 ಕ್ಕೂ ಅಧಿಕ ಮೊಟ್ಟೆಗಳನ್ನ ರಕ್ಷಿಸಿದ್ದಾರೆ. ಆದರೆ ಒಂದೇ ಜಾಗದಲ್ಲಿ ಹಾವುಗಳ ಜೊತೆ ಅಷ್ಟೊಂದು ಮೊಟ್ಟೆ ನೋಡಿದ ಸ್ಥಳೀಯರು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೀರಾವುಗಳ ಸಂತತಿಯೂ ತೀರಾ ಕಡಿಮೆಯಾಗಿದೆ. ಆದರೆ ನಾಗರಹಾವು ಏಕಕಾಲದಲ್ಲಿ 5, 10, 15 ಮೊಟ್ಟೆ ಇಡುತ್ತವೆ. ನೀರಾವು 40, 50 ಮೊಟ್ಟೆ ಇಡುತ್ತವೆ. ಆದ್ರೆ ಹೀಗೆ 100, 200 ಮೊಟ್ಟೆಯನ್ನೂ ಇಡುತ್ತವೆ ಅಂದ್ರೆ ಇದು ತೀರಾ ವಿರಳ ಎಂದು ನರೇಶ್ ಹೇಳಿದ್ದಾರೆ.
ಸದ್ಯ ನರೇಶ್ ಅವರು ಎರಡೂ ಹಾವುಗಳನ್ನ ರಕ್ಷಿಸಿ ಅವುಗಳನ್ನ ಕಾಡಿಗೆ ಬಿಟ್ಟಿದ್ದಾರೆ. ಆದರೆ ಮೊಟ್ಟೆಗಳನ್ನ ಮನೆಗೆ ತಂದಿದ್ದಾರೆ. ಅವುಗಳನ್ನು ತಾಪದ ಜಾಗದಲ್ಲಿಟ್ಟು, ಕಾವು ನೀಡಿ ಮರಿಯಾದ ಮೇಲೆ ಅವುಗಳನ್ನ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.