ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ (Rain) ಆರ್ಭಟ ಮುಂದುವರಿದಿದ್ದು, ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಕೆಆರ್‌ಎಸ್ (KRS) ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬಂದಿದೆ. ಇದರಿಂದ ಕೆಆರ್‌ಎಸ್ ಡ್ಯಾಂಗೆ ಜೀವ ಕಳೆ ಬಂದಿದೆ.
ಸೋಮವಾರ ಬೆಳಗ್ಗೆ 10,121 ಕ್ಯುಸೆಕ್ ನೀರು ಹರಿದು ಬಂದಿತ್ತು. ಸಂಜೆ ವೇಳೆಗೆ 19,202 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಇಂದು ಒಳಹರಿವು 25,933 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಸಂಜೆಯ ವೇಳೆಗೆ 30,000 ಕ್ಯುಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ 2 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಇದೀಗ 107.60 ಅಡಿಯಷ್ಟು ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿದೆ.
ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಿಂದ ರೈತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಒಳಹರಿವು ಇದೇ ರೀತಿ ಬಂದರೆ ಕೆಲವೇ ದಿನದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ. ಕಾವೇರಿಗಾಗಿ ತಮಿಳುನಾಡು ಕ್ಯಾತೆಯಲ್ಲಿದ್ದ ಕರುನಾಡಿಗೆ ಇದೀಗ ಸ್ವಲ್ಪ ನಿರಾಳವಾಗಿದೆ. ಮಳೆ ಆರ್ಭಟ ಮುಂದುವರೆದರೆ ತಮಿಳುನಾಡಿಗೂ ನೀರು ಬಿಡುವ ಸಾಧ್ಯತೆ ಇದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 107.60 ಅಡಿ
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 29.378 ಟಿಎಂಸಿ
ಒಳಹರಿವು – 25,933 ಕ್ಯುಸೆಕ್
ಹೊರಹರಿವು – 2,289 ಕ್ಯುಸೆಕ್