ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬ ಹತ್ತಿರ ಬಂತು ಕೆರೆ ಏರಿ ಬಳಿ ಇರೋ 5 ನಾಗರಕಲ್ಲುಗಳ ಸುತ್ತಮುತ್ತ ಸ್ವಚ್ಛ ಮಾಡೋಣ ಎಂದು ಹೋದ ತಾಲೂಕಿನ ಮಂಚನಬಲೆ ಗ್ರಾಮಸ್ಥರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 200ಕ್ಕೂ ಹೆಚ್ಚು ನಾಗರಕಲ್ಲುಗಳು ಸಿಕ್ಕಿವೆ.
ಪ್ರತಿ ವರ್ಷ ಗೌರಿ ಗಣೇಶ ಹಬ್ಬದಂದು ಕೆರೆ ಏರಿ ಮೇಲಿರೋ ನಾಗರಕಲ್ಲುಗಳಿಗೆ ಗ್ರಾಮಸ್ಥರು ಪೂಜೆ ಪುನಸ್ಕಾರ ಮಾಡಿಕೊಂಡು ಬರುತ್ತಿದ್ದರು. ಇತ್ತೀಚಿಗೆ ನಾಗರಪಂಚಮಿ ಹಬ್ಬಕ್ಕೂ ಗ್ರಾಮದ ಮಹಿಳೆಯರೆಲ್ಲಾ ಸೇರಿ ಗ್ರಾಮದಲ್ಲಿದ್ದ 5 ನಾಗರಕಲ್ಲುಗಳಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಿದ್ದರು. ಆದರೆ ಆ ವೇಳೆ ನಾಗರಕಲ್ಲುಗಳ ಸುತ್ತ ಮುತ್ತ ಸಾಕಷ್ಟು ಗಿಡಗಂಟೆಗಳು ಬೆಳೆದುಕೊಂಡಿದ್ದನ್ನು ಗಮನಿಸಿದ್ದನ್ನು ಗ್ರಾಮಸ್ಥರಿಗೆ ತಿಳಿಸಿದ್ದರು. ಹೀಗಾಗಿ ಗಿಡಗಂಟೆಗಳನ್ನ ತೆಗೆದು ಸ್ವಚ್ಛ ಮಾಡೋಣ ಎಂದು ಹೋದ ಯುವಕರಿಗೆ ಸ್ಥಳದಲ್ಲಿ ಅಗೆಯುತ್ತಿದ್ದಂತೆ ಒಂದರ ಹಿಂದೆ ಒಂದರಂತೆ 200ಕ್ಕೂ ಹೆಚ್ಚು ನಾಗರಕಲ್ಲುಗಳು, ವೀರಗಲ್ಲುಗಳು ಹಾಗೂ ಪಾದದ ಹೆಜ್ಜೆ ಗುರುತಿನ ಕಲ್ಲುಗಳು ಪತ್ತೆಯಾಗಿದೆ.
Advertisement
Advertisement
ಒಂದೇ ಕಡೆ ಇಷ್ಟು ನಾಗರಕಲ್ಲುಗಳು ಸಿಕ್ಕಿರುವುದರಿಂದ ಗ್ರಾಮಸ್ಥರೆಲ್ಲರಿಗೂ ಅಚ್ಚರಿಯಾಗಿದೆ. ನಾವು ನಮ್ಮ ತಾತನ ಕಾಲದಿಂದಲೂ ಈ ಕೆರೆ ಏರಿ ಬಳಿ ಬರುತ್ತಿದ್ದೇವೆ. ಆದರೆ ಇಷ್ಟೆಲ್ಲಾ ನಾಗರಕಲ್ಲುಗಳು ಇಲ್ಲಿರೋದು ನಮಗೆ ಗೊತ್ತಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾಗದೋಷ ಇರುವವರು, ಮಕ್ಕಳಾಗದವರು ಮಕ್ಕಳಾಗಲಿ ಎಂದು ನಾಗರಕಲ್ಲುಗಳನ್ನ ಪ್ರತಿಷ್ಠಾಪನೆ ಮಾಡೋದು ಸಾಮಾನ್ಯವಾಗಿದ್ದು, ಅದೇ ರೀತಿ ಹಿಂದಿನ ಕಾಲದಲ್ಲಿ ಪ್ರತಿಷ್ಠಾಪನೆ ಮಾಡಿರಬಹುದು ಎಂದು ಜನರು ಊಹಿಸಿದ್ದಾರೆ.
Advertisement
ಸದ್ಯ ಪತ್ತೆಯಾಗಿರುವ ಎಲ್ಲಾ ನಾಗರಕಲ್ಲುಗಳನ್ನು ಅದೇ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.