ದಾವಣಗೆರೆ: ದಕ್ಷಿಣ ಕ್ಷೇತ್ರದ ಉಪಸಮರಕ್ಕೂ ಮುನ್ನವೇ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆ 20 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು (Muslim Leaders), ಯುವನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮುಖಂಡರು ಮುಂದಿನ ದಿನಗಳಲ್ಲಿ ಇನ್ನಷ್ಟು ಅಲ್ಪಸಂಖ್ಯಾತರನ್ನ ಬಿಜೆಪಿಗೆ ಸೇರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಜೊತೆಗೆ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನ (Congress Candidate) ಸೋಲಿಸುವುದಾಗಿ ಪಣ ತೊಟ್ಟಿದ್ದಾರೆ.
ʻಕೈ’ಗೆ ಬಂಡಾಯದ ಬಿಸಿ
ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಕಡೆಗಣಿಸಿದ್ದಕ್ಕೆ ಮುಸ್ಲಿಂ ಮುಖಂಡರು ಕೆಂಡಾಮಂಡಲವಾಗಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿರುವ ಮುಖಂಡರು, ಇಂದು ಸಾಮೂಹಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ.

ಶಾಮನೂರು ಕೋಟೆಯ ಪೈಟ್ ಹೇಗಿದೆ?
ದಾವಣಗೆರೆ ದಕ್ಷಿಣ ಅಂದ್ರೆ ಅದು ಶಾಮನೂರು ಕುಟುಂಬದ ಸಾಮ್ರಾಜ್ಯ ಎಂಬ ಮಾತಿದೆ. ಇದೇ ನಂಬಿಕೆಯ ಮೇಲೆ ಹೈಕಮಾಂಡ್ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರಿಗೆ ಮಣೆ ಹಾಕಿದೆ. ಆದರೆ, ಈ ನಿರ್ಧಾರ ಈಗ ಕೈ ಪಾಳಯದಲ್ಲಿ ಬೆಂಕಿ ಹಚ್ಚಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಮತದಾರರನ್ನ ಹೈಕಮಾಂಡ್ ನಿರ್ಲಕ್ಷಿಸಿದೆ ಎಂಬುದು ಮುಸ್ಲಿಂ ಮುಖಂಡರ ನೇರ ಆರೋಪ.
ನಮ್ಮನ್ನ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ತೀರಿ, ಅಧಿಕಾರ ಕೊಡಲ್ಲ ಎಂದು ಮುಖಂಡರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಅಸಮಾಧಾನ ಕೇವಲ ಮಾತಿಗೆ ಸೀಮಿತವಾಗಿಲ್ಲ. ಇಂದು ಹತ್ತಾರು ಸಂಖ್ಯೆಯಲ್ಲಿ ಮುಸ್ಲಿಂ ಮುಖಂಡರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಬೆಂಬಲಿತ ಪಡೆಯೂ ಈ ಬಂಡಾಯದಲ್ಲಿ ಒಳಗೊಳಗೇ ಕೈಜೋಡಿಸಿದೆಯಾ ಎಂಬ ಅನುಮಾನ ದಟ್ಟವಾಗಿದೆ. ಅದರಲ್ಲೂ ಕಾಂಗ್ರೆಸ್ ಮುಖಂಡ ಸಾಧಿಕ್ ಪೈಲ್ವಾನ್ ಈ ಬಾರಿ ಪ್ರಭಲವಾಗಿ ನಿಂತಿದ್ದು, ನಮ್ಮ ಸಮುದಾಯಕ್ಕೆ ಗೌರವ ಸಿಗದ ಕಡೆ ನಾವೇಕೆ ಇರಬೇಕು ಎಂದು ಪ್ರಶ್ನಿಸಿದ್ದಾರೆ. ಸಮರ್ಥ್ಗೆ ಸೋಲಿನ ರುಚಿ ತೋರಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ದೊಡ್ಡ ಮಟ್ಟದ ಪೆಟ್ಟು ಬೀಳುವ ಲಕ್ಷಣಗಳು ದಟ್ಟವಾಗಿವೆ.

ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ದಾವಣಗೆರೆಯ ಅಖ್ತಾರ್ ರಾಜ್ ಸರ್ಕಲ್‌ನಲ್ಲಿ ಸಾವಿರಾರು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಸಾಕಷ್ಟು ಮನವಿ ಮಾಡಿದ್ರು ನಮ್ಮ ಮನವಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಕೇವಲ ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿದೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ ಡಿಕೆಶಿ ವಿರುದ್ದ ಧಿಕ್ಕಾರ ಕೂಗಿದರು.
ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಎ.ಎಸ್ ಮಲ್ಲಿಕಾರ್ಜುನ್ ಎಲ್ಲಾರು ಈಗ ಸಿಟ್ಟಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಬಂಡಾಯ ಎಲ್ಲಾ ಶಮನವಾಗುತ್ತೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದ ಕಾಂಗ್ರೆಸ್‌ನ ಶಕ್ತಿಯಾಗಿದ್ದ ಮುಸ್ಲಿಂ ಮತದಾರರು ಈಗ ಕೈ ಬಿಟ್ಟರೆ, ಸಮರ್ಥ್ ಹಾದಿ ಸುಗಮವಾಗಿರುವುದಿಲ್ಲ. ಅಸಮಾಧಾನಿತರನ್ನ ಶಾಂತಗೊಳಿಸಲು ಸಚಿವ ಮಲ್ಲಿಕಾರ್ಜುನ್ ಮುಂದಾಗ್ತಾರಾ ಅಥವಾ ಈ ಬಂಡಾಯ ಕಾಂಗ್ರೆಸ್ ಕೋಟೆಯನ್ನು ಧೂಳೀಪಟ ಮಾಡುತ್ತಾ ಎನ್ನುವುದು ಕಾದು ನೋಡಬೇಕಿದೆ.

