ತುಮಕೂರು: ರಾಜಣ್ಣರನ್ನು (KN Rajanna) ಸಹಕಾರಿ ಸಚಿವ ಸ್ಥಾನದಿಂದ ವಜಾ ಆದ ಬಳಿಕ ತುಮಕೂರಿನಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಜೊತೆಗೆ ಹೈಕಮಾಂಡ್‌ನ ಈ ನಿರ್ಧಾರದ ವಿರುದ್ಧ ಆಕ್ರೋಶದ ಕೂಗುಗಳ ಜೊತೆಗೆ ಮತ್ತೆ ಸಚಿವ ಸ್ಥಾನ ಕೊಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈಗ ರಾಜಣ್ಣನ ಬೆನ್ನಿಗೆ ನಿಂತ ವಿವಿಧ ಮಠಗಳ ಸ್ವಾಮೀಜಿಗಳು (Swamijis) ಸಹ ಸಚಿವ ಸ್ಥಾನ ಮತ್ತೆ ನೀಡಬೇಕೆಂದು ಧ್ವನಿ ಎತ್ತಿದ್ದಾರೆ.
ಇಂದು ತುಮಕೂರಿನ (Tumakuru) ಕ್ಯಾತ್ಸಂದ್ರ ರಾಜಣ್ಣನ ನಿವಾಸಕ್ಕೆ ಬಂದ ಚಿತ್ರದುರ್ಗದ ಶ್ರೀ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು, ದಾವಣಗೆರೆಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು, ಸ್ವಾಮೀಜಿಗಳು ರಾಜಣ್ಣನವರನ್ನು ಭೇಟಿಯಾದರು. ಸತತ ಒಂದು ಘಂಟೆಗೂ ಅಧಿಕ ಕಾಲ ರಾಜಣ್ಣನ ಜೊತೆ ಚರ್ಚೆ ನಡೆಸಿದ 15ಕ್ಕೂ ಹೆಚ್ಚು ಸ್ವಾಮಿಜಿಗಳು ಸಚಿವ ಸ್ಥಾನದಿಂದ ತೆರವು ವಿಚಾರಕ್ಕೆ ಬೇಸರ ವ್ಯಕ್ತಪಡಿಸುವುದರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಮಾತುಗಳನ್ನಾಡಿದರು.
ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣನ ಸಚಿವ ಸ್ಥಾನದಿಂದ ಕೈ ಬಿಟ್ಟಿರೊದು ಆಘಾತಕಾರಿ ವಿಚಾರ. ಇದು ರಾಜಣ್ಣನವರಿಗೆ ಆದ ನಷ್ಟವಲ್ಲ ಬದಲಾಗಿ ರಾಜ್ಯದ ಜನತೆಗೆ ಆದ ನಷ್ಟ. ಒಬ್ಬ ಹಿಂದುಳಿದ ನಾಯಕನಿಗೆ ಸಮಯ ಕೊಡಬೇಕಿತ್ತು. ಹೈಕಂಮಾಂಡ್ ಈ ವಿಚಾರ ಗಂಭೀರವಾಗಿ ಪರಿಗಣಿಸಿ ಮತ್ತೆ ರಾಜಣ್ಣನಿಗೆ ಸಚಿವ ಸ್ಥಾನ ಕೊಡಬೇಕು. ರಾಜಣ್ಣನಿಗೆ ಪುನಃ ಸಚಿವ ಸ್ಥಾನ ನೀಡಬೇಕೆಂದು ದಲಿತ ಹಿಂದುಳಿದ ವರ್ಗಗಳ ಒಕ್ಕೂಟದ ಸ್ವಾಮೀಜಿಗಳು ಹೈಕಮಾಂಡ್ ಭೇಟಿಗೆ ನಿರ್ಧಾರ ಮಾಡಿದ್ದೇವೆ. ಒಂದು ರಾಷ್ಟ್ರೀಯ ಪಕ್ಷ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೆ ಒಂದು ನ್ಯಾಯ ಮಾಡಬಾರದು. ದಲಿತ ಮತ ಚದುರದಂತೆ ನೋಡಿಕೊಳ್ಳಬೇಕು. ಹಾಗಾಗಿ ರಾಜಣ್ಣರಿಗೆ ಮತ್ತೆ ಸಚಿವ ಸ್ಥಾನಮಾನ ಕೊಡಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.
ಇನ್ನು ಸ್ವಾಮೀಜಿಗಳ ಭೇಟಿ ಬಳಿಕ ಮಾತನಾಡಿದ ರಾಜಣ್ಣ, ಸ್ವಾಮಿಜಿಗಳು ಆಶೀರ್ವದಿಸಲು ಬಂದಿದ್ದರು. ಹೊರತುಪಡಿಸಿ ಅಧಿಕಾರ ಹೋದ ತಕ್ಷಣ ಅಸಮಾಧಾನ ಆಗಲಿ, ಚಿಂತೆ ಆಗಲಿ ಇಲ್ಲಾ. ಎಲ್ಲಾ ಜಾತಿಯ ಬಡವರ ಪರವಾದ ಧ್ವನಿಯೆತ್ತುವ ಕೆಲಸ ಮಾಡುತ್ತೇನೆ. ನಾನು ದೆಹಲಿಗೆ ಸಂಪುಟಕ್ಕೆ ಸೇರಿಸಿ ಅಂತಾ ಹೊಗಿದ್ನಾ? ನನಗೆ ಮಂತ್ರಿ ಸ್ಥಾನದ ಅಗತ್ಯತೆ ಏನು ಇಲ್ಲ. ಆದರೇ ಮತಗಳ್ಳತನ ಹೇಳಿಕೆ ಹೊರತು ಪಡಿಸಿ ಸಚಿವ ಸ್ಥಾನದಿಂದ ವಜಾ ಮಾಡಲು ಬೇರೆ ಕಾರಣ ಇತ್ತು ಎನಿಸುತ್ತದೆ. ಹನಿಟ್ರ‍್ಯಾಪ್ ಬಗ್ಗೆ ಹೇಳಿದ್ದೆ. ಡಿಸಿಎಂ ಬಗ್ಗೆ ಹೇಳಿದ್ದೆ ಇದೆಲ್ಲಾ ಕಾರಣ ಅನಿಸುತ್ತೆ. ಆದರೇ ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲಾ. ಬೇರೆ ಪಕ್ಷ ಸೇರೋ ಅಗತ್ಯವೂ ಇಲ್ಲಾ ಎಂದು ತಿಳಿಸಿದರು.
ಸದ್ಯ ರಾಜಣ್ಣನಿಗೆ ವಾಪಾಸ್ ಸಚಿವ ಸ್ಥಾನದ ಕೂಗೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜಣ್ಣ ಬೆನ್ನಿಗೆ 15ಕ್ಕೂ ಹೆಚ್ಚು ಮಠದ ಸ್ವಾಮಿಜಿಗಳು ನಿಂತಿದ್ದು, ಮುಂದೆ ಹೈಕಮಾಂಡ್ ಇದನ್ನು ಯಾವ ರೀತಿ ಪರಿಗಣಿಸುತ್ತದೆ ಎಂದು ನೋಡಬೇಕಿದೆ. ಈ ನಡುವೆ ರಾಜಣ್ಣರ ಅಭಿಮಾನಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸೋನಿಯಾಗಾಂಧಿ ಮನೆ ಮುಂದೆನೂ ಧರಣಿ ಮಾಡಲು ಅಣಿಯಾಗಿದ್ದಾರೆ. ಹೈಕಮಾಂಡ್ ಈ ಎಲ್ಲಾ ಹೋರಾಟಕ್ಕೆ ಮಣೆ ಹಾಕುತ್ತಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.