ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲೇ ಬೆಂಗಳೂರಿನಲ್ಲಿ (Bengaluru) 15 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು (Indira Canteen) ಬಂದ್ ಆಗಿವೆ.
2013ರ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮಹತ್ವ ಯೋಜನೆ ‘ಇಂದಿರಾ ಕ್ಯಾಂಟೀನ್’. ಕೇವಲ ಬೆಂಗಳೂರಿಗೆ ಮಾತ್ರ ಅಲ್ಲದೆ ಇಡೀ ರಾಜ್ಯಕ್ಕೆ ಈ ಯೋಜನೆಯನ್ನ ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಪಡೆದಿದ್ದರು. ಆದರೆ ಈಗ ಎರಡನೇ ಬಾರಿಗೆ ಅವರದೇ ಸರ್ಕಾರ ಅಧಿಕಾರದಲ್ಲಿದೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕನಸಿನ ಕೂಸು ಕೆಲ ಕಡೆ ಐಸಿಯು ಸೇರಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ, ನಗರದ ಒಂದು ಭಾಗದಲ್ಲಿ ಇಡೀ ಯೋಜನೆ ಹಳ್ಳ ಹಿಡಿದಿದೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ – ಐದು ವರ್ಷದ ಬಾಲಕಿ ಮೃತದೇಹ ಪತ್ತೆ
2013 ರಲ್ಲಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಇಂದಿರಾ ಕ್ಯಾಂಟೀನ್ ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಹಸಿದ ಹೊಟ್ಟೆಗಳನ್ನ ತುಂಬಿಸಿತ್ತು. ಅಲ್ಲದೇ ಇತರ ರಾಜ್ಯಗಳಿಗೂ ಈ ಯೋಜನೆ ಸ್ಫೂರ್ತಿ ಆಗಿತ್ತು. ಆದರೆ ಬೆಂಗಳೂರು ದಕ್ಷಿಣದಲ್ಲಿ ಈ ಯೋಜನೆ ಸಂಪೂರ್ಣ ಹಳ್ಳ ಹಿಡಿಯುವಂತಾಗಿದೆ. ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಅಂತಾ ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ, ಪಾಲಿಕೆಯ ದಕ್ಷಿಣ ವಲಯಕ್ಕೆ ಬರುವ 15ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಕಳೆದ 15-20 ದಿನಗಳಿಂದ ಬಾಗಿಲು ಬಂದ್ ಮಾಡಿದೆ.
ಬಡವರ ಪಾಲಿನ ಅನ್ನಪೂರ್ಣೇಶ್ವರಿ ಎಂದೇ ಕರೆಸಿಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಕಾಂಗ್ರೆಸ್ ಸರ್ಕಾರದ ಅವದಿಯಲ್ಲೇ ಈ ರೀತಿ ಅವನತಿಯ ಹಾದಿ ಹಿಡಿದಿರುವುದು ನಿಜಕ್ಕೂ ಸಿಎಂ ಸಿದ್ದರಾಮಯ್ಯರಿಗೆ ಮುಜುಗರ ತರಿಸಿದೆ. ಅದರಲ್ಲೂ ನಗರದ ಪ್ರಮುಖ ಆಸ್ಪತ್ರೆಗಳ ಆವರಣ, ಅಕ್ಕಪಕ್ಕದಲ್ಲಿರುವ ಕ್ಯಾಂಟೀನ್‌ಗಳೇ ಮುಚ್ಚಿವೆ. ನಿಜವಾಗಿ ಯಾರಿಗೆ ಯೋಜನೆ ತಲುಪಬೇಕಿತ್ತೋ ಅವರೇ ಯೋಜನೆ ಸಿಗದೇ ಪರದಾಡುವಂತಾಗಿದೆ. ಇದನ್ನೂ ಓದಿ: ಉದ್ಯೋಗ ಕಲ್ಪಿಸುವ ವಿಧೇಯಕ ತಡೆಹಿಡಿದು ಕನ್ನಡಿಗ, ಕರ್ನಾಟಕಕ್ಕೆ ಅಪಮಾನ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್‌ಗಳಿವೆ. ಶುರುವಾದಾಗಿನಿಂದ ಪ್ರತಿ ನಿತ್ಯ ಮೂರೂವರೆ ಲಕ್ಷ ಜನ ಊಟ, ತಿಂಡಿ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕಂಪನಿಗೆ ಪಾಲಿಕೆ 47 ಕೋಟಿ ಹಣ ನೀಡಬೇಕಿದೆ. ಕ್ಯಾಂಟೀನ್ ಸಿಬ್ಬಂದಿ ಸಂಬಳ, ದಿನಸಿ ಬಿಲ್ ಸಮಸ್ಯೆಯಿಂದಾಗಿ ಟೆಂಡರ್ ಪಡೆದ ಸಂಸ್ಥೆ ಕ್ಯಾಂಟೀನ್‌ಗೆ ಬೀಗ ಹಾಕಿದೆ. ಬಸವನಗುಡಿ, ಪದ್ಮನಾಭನಗರ, ಚಿಕ್ಕಪೇಟೆ, ಜಯನಗರ ಕ್ಷೇತ್ರಗಳಲ್ಲಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿರುವಾಗಲೇ ಅವರ ಯೋಜನೆ ಈ ರೀತಿ ಹಳ್ಳ ಹಿಡಿಯುತ್ತಿರೋದು ವಿಪರ್ಯಾಸ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.