ಬೆಂಗಳೂರು: ಮೇಲ್ಮನೆಯ ಒಂದು ಸ್ಥಾನಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂ, ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ನಿನ್ನೆಯಷ್ಟೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿ.ಎಂ ಇಬ್ರಾಹಿಂ ಹೆಸರಿಗೆ ಒಪ್ಪಿಗೆ ಕೊಟ್ಟಿದ್ದು, ಇಂದು ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Advertisement
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಅಭ್ಯರ್ಥಿ ಮಾಡಿದ್ದಕ್ಕೆ ಸೋನಿಯಾ ಗಾಂಧಿ, ಸಿಎಂ, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರಿಗೆ ಅಭಿನಂದನೆಗಳು. ನಾನು ಶುಕ್ರವಾರ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಸಿಎಂಗೆ ರಾಜೀನಾಮೆ ಸಮರ್ಪಿಸಿದ್ದೇನೆ. ಸೋಮವಾರದಂದು ಮೇಲ್ಮನೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸ್ತಿದ್ದೇನೆ. ಇದರ ಸಂಬಂಧ ಇಂದು ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದೇನೆ. ಸಿಎಂ ಜೊತೆ ನನ್ನದು ಹಳೆಯ ಗೆಳೆತನವಿದೆ. ಸಿಎಂ ಮೇಲೆ ನಾನು ಯಾವತ್ತೂ ಮುನಿಸಿಕೊಂಡಿಲ್ಲ. ಸಿಎಂ ನನಗೆ ಒಳ್ಳೆಯ ಸಲಹೆ ಕೊಡ್ತಿರ್ತಾರೆ. ಉಪಮುಖ್ಯಮಂತ್ರಿಯಾಗಿದ್ದಕ್ಕಿಂತಲೂ ಈಗ ಸಿಎಂ ಆಗಿ ಸಿದ್ದರಾಮಯ್ಯನವರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಮುಂದಿನ ಬಾರಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ರು.
Advertisement
ಜೆಡಿಎಸ್ ಸೇರುವ ಮೂನ್ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿ ನೀಡಿತೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮದುಮಗಳು ಚೆನ್ನಾಗಿ ಇದ್ರೆ, ಗಂಡುಗಳು ಜಾಸ್ತಿ ಬರ್ತಾವೆ ಅಂದ್ರು. ಆ ಮೂಲಕ ಜೆಡಿಎಸ್ ತನಗೆ ಆಫರ್ ಮಾಡಿದ್ದನ್ನ ಪರೋಕ್ಷವಾಗಿ ಸಿಎಂ ಇಬ್ರಾಹಿಂ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಈಗ ನನಗೆ ಜವಾಬ್ದಾರಿ ನೀಡಿದೆ. ನನಗೊಂದು ಜವಾಬ್ದಾರಿ ನೀಡಲಿ ಎನ್ನೋದು ಜನರ ಅಭಿಪ್ರಾಯವೂ ಕೂಡ ಆಗಿತ್ತು ಅಂತ ಅವರು ಹೇಳಿದ್ರು.