ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇನ್ನಷ್ಟು ಚೂರಿಗಳು ಬರುವುದು ಬಾಕಿ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಪರೋಕ್ಷವಾಗಿ ಜಿ.ಟಿ.ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಅಲ್ಲಲ್ಲಿ ಚೂರಿಗಳ ಮಾತುಗಳು ಕೇಳುತ್ತಿವೆ. ಅವೆಲ್ಲವು ಶೀಘ್ರದಲ್ಲೇ ಹೊರ ಬರಲಿವೆ. ನಮ್ಮ ಪಕ್ಷದಲ್ಲೇ ಚೂರಿಗಳ ಸದ್ದು ಕೇಳಿಸುತ್ತಿದೆ. ಆದರೆ ಎಲ್ಲ ಚೂರಿಗಳನ್ನು ಅರಗಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿ ಅವರಿಗಿದೆ ಎಂದು ಹೇಳಿದರು.
Advertisement
Advertisement
14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಎಚ್‍ಡಿಕೆ ಉಂಡಷ್ಟು ನೋವು ಯಾರು ಉಣ್ಣಲಿಲ್ಲ. ಬೆಳಗ್ಗೆ ಒಂದು ಗಂಟೆ ಅಧಿಕಾರಿಗಳ ಸಭೆ ಮಾಡಿದರೆ ಮುಗಿಯಿತು. ನಂತರ ಅಸಮಾಧಾನಗೊಂಡ ಶಾಸಕರ ಸಮಾಧಾನದಲ್ಲೇ ಸಮಯ ಕಳೆಯಬೇಕಾಗಿತ್ತು. ಕುಮಾರಸ್ವಾಮಿಯವರ ಹತ್ತಿರವೇ ನಾನಿದ್ದ ಕಾರಣ ಅವರು ಉಂಡ ಎಲ್ಲ ನೋವುಗಳು ನನಗೆ ತಿಳಿದಿದೆ. ಇದೀಗ ಅಧಿಕಾರ ಹೋದ ನಂತರದಲ್ಲಿ ಮತ್ತೆ ಅದೇ ನೋವು ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ನಿನ್ನೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಸಭೆಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಗೈರಾಗಿರುವುದರ ಕುರಿತು ಜಿಟಿಡಿ ಹಾಗೂ ದೇವೇಗೌಡರ ನಡುವೆ ವಾಗ್ವಾದ ನಡೆದಿತ್ತು. ಎಚ್‍ಡಿಡಿ ಪ್ರತಿಕ್ರಿಯಿಸಿ ಅವರು ಎಲ್ಲಿಗಾದರೂ ಹೋಗಲಿ ಬಿಡಿ, ಅವರ ಪಾಡಿಗೆ ಅವರನ್ನು ಬಿಡಿ ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಪ್ರತಿಕ್ರಿಯಿಸಿ, ಜೆಡಿಎಸ್ ಸಭೆಗೆ ನನ್ನನ್ನು ಆಹ್ವಾನಿಸಿರಲಿಲ್ಲ. ಹೀಗಾಗಿ ನಾನು ಸಭೆಗೆ ಹೋಗಿಲ್ಲ ಎಂದು ತಿಳಿಸಿದ್ದರು. ಈ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಜಿಟಿಡಿ ಹೇಳಿದ್ದರು ಎಂದು ಹೇಳಿದ್ದರು. ಇದಕ್ಕೆ ಜಿಟಿಡಿ ಆಕ್ರೋಶ ವ್ಯಕ್ತಪಡಿಸಿ, ಚಾಮುಂಡಿ ತಾಯಿಯಾಣೆ ನಾನು ಸಾರಾ ಮಹೇಶ್‍ಗೆ ಸಚಿವ ಸ್ಥಾನ ನೀಡಬೇಡಿ ಎಂದು ಹೇಳಿಲ್ಲ ಎಂದು ತಿರುಗೇಟು ನೀಡಿದ್ದರು. ಇದೀಗ ಸಾರಾ ಮಹೇಶ್ ಪರೋಕ್ಷವಾಗಿ ಜಿಟಿಡಿ ವಿರುದ್ಧ ಹರಿಹಾಯ್ದಿದ್ದಾರೆ.