ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಅರ್ಚಕರ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ.
ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮುಖಂಡರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಯಾಕೆ ಪ್ರವೇಶಿಸಬಾರದು?
ನವರಾತ್ರಿಯಲ್ಲಿ ಕೊಲ್ಲೂರಿನಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿಯ ಮೊದಲ ದಿನ ಒಬ್ಬರಿಗೆ, ಎರಡನೇ ದಿನ ಇಬ್ಬರಿಗೆ ಹೀಗೆ ಕ್ರಮವಾಗಿ ನೀಡುತ್ತಾ ಬಂದು ಕೊನೆಯ (9ನೇ) ದಿನ ಗ್ರಾಮದ 9 ಜನ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮಿ ಮಂಟಪ ಪ್ರವೇಶಿಸಬಹುದು. ಆದರೆ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದರಿಂದ ಅಪಚಾರ ಆಗಿದೆ ಎಂಬುದು ಸದ್ಯದ ಆರೋಪ.
Advertisement
ಉಮಾ ಅವರು ಅಧಿಕಾರದಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಭಕ್ತರೊಬ್ಬರು ಹರಕೆ ನೀಡಿದ್ದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್‍ಮಾಲ್ ಮಾಡಿದ್ದರು. ಅವರು ಅಧಿಕಾರದಲ್ಲಿ ಇರುವುದಾಗ ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು. ಆದರೆ ಈಗ ವಿವಾದ ಎದುರಿಸುತ್ತಿರುವಾಗ ದೇವಸ್ಥಾನ ಹಾಗೂ ಲಕ್ಷ್ಮಿ ಮಂಟಪ ಪ್ರವೇಶ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.
Advertisement
ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಕೆಲ ಅರ್ಚಕರು ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದನ್ನು ನೋಡಿದ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಇತ್ತ ಭಕ್ತರು ಕೂಡ ಅರ್ಚಕರ ವಿರುದ್ಧ ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv